ತಾಯಿ, ಅವಳಿ ಮಕ್ಕಳ ಕೊಲೆ : 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರ ಸೆರೆ

ಕ್ರೈಂ ಥ್ರಿಲ್ಲರ್‌ ಸಿನೆಮಾದಂತಿದೆ ಕೇರಳದಲ್ಲಿ ನಡೆದ ಈ ಹತ್ಯಾ ಪ್ರಕರಣ

ತಿರುವನಂತಪುರ: ತಾಯಿ ಮತ್ತು ಆಕೆಯ ನವಜಾತ ಅವಳಿ ಮಕ್ಕಳನ್ನು ಉಸಿರು ಕಟ್ಟಿಸಿ ಕೊಂದು 19 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕೇರಳದಲ್ಲಿ ನಡೆದಿರುವ ಈ ಕೊಲೆ ಮತ್ತು ಆರೋಪಿಗಳ ಪತ್ತೆ ಕಾರ್ಯ ಯಾವುದೇ ಕ್ರೈಂ ಥ್ರಿಲ್ಲರ್‌ ಸಿನೇಮಾಕ್ಕೆ ಕಡಿಮೆಯಿಲ್ಲ. ಕಳೆದ ಮೂರು ತಿಂಗಳಿನಿಂದ ಸಿಬಿಐ ಮತ್ತು ಕೇರಳ ಪೊಲೀಸರ ತನಿಖಾ ತಂಡ 10,000ಕ್ಕೂ ಅಧಿಕ ಸಾಮಾಜಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಜಾಲಾಡಿ ಇಬ್ಬರು ಆರೋಪಿಗಳನ್ನು ಬಲೆಗೆ ಬೀಳಿಸಿಕೊಂಡಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಸಮೀಪದ ಯೆರಮ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ 2006ರ ಫೆಬ್ರುವರಿ 10ರಂದು ರಜನಿ ಎಂಬ ಮಹಿಳೆ ಹಾಗೂ ನವಜಾತ ಅವಳಿ ಹೆಣ್ಣು ಮಕ್ಕಳ ಹತ್ಯೆಯಾಗಿತ್ತು. ಅವಳಿ ಮಕ್ಕಳ ಜನ್ಮ ಪ್ರಮಾಣಪತ್ರ ಪಡೆಯಲು ತೆರಳಿದ್ದ ರಜನಿ ತಾಯಿ ಪಂಚಾಯತ್ ಕಚೇರಿಯಿಂದ ಮರಳಿದಾಗ ಮೂರು ಮೃತದೇಹ ಮನೆಯಲ್ಲಿ ಕಂಡುಬಂದಿತ್ತು.
ಅಂಚಲ್ ಮೂಲದ ದಿವಿಲ್ ಕುಮಾರ್ ಬಿ ಎಂಬಾತ ಆಗ 28 ವರ್ಷದವನಾಗಿದ್ದು, ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್‌ನಲ್ಲಿ ಪಠಾಣ್‌ಕೋಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ರಜನಿ ಜತೆ ಪ್ರೇಮ ಸಂಬಂಧ ಹೊಂದಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿತ್ತು. 2006ರ ಜನವರಿ 24ರಂದು ಮದುವೆಗೂ ಮೊದಲೇ ಅವಳಿ ಮಕ್ಕಳು ಜನಿಸಿದ ಬಳಿಕ ಆತ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಅವಿವಾಹಿತ ತಾಯಿ ಕೇರಳ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಆಗ ಅವಳಿ ಮಕ್ಕಳ ಪಿತೃತ್ವ ಪರೀಕ್ಷೆಯನ್ನು ನಡೆಸುವಂತೆ ಆಯೋಗ ಆದೇಶ ನೀಡಿತ್ತು. ಇದರಿಂದ ಹತಾಶನಾದ ದಿವಿಲ್ ಕುಮಾರ್, ಹತ್ಯೆಯ ಸಂಚು ರೂಪಿಸಿದ್ದ.
ದಿವಿಲ್ ಕುಮಾರ್ ಸಹೋದ್ಯೋಗಿ ಕಣ್ಣೂರು ಜಿಲ್ಲೆಯ ಶ್ರೀಕಂಠಪುರಂ ನಿವಾಸಿ ಪಿ.ರಾಜೇಶ್ (33) ಎಂಬಾತ ರಜನಿ ಮತ್ತು ಆಕೆಯ ತಾಯಿ ಜತೆ ಸ್ನೇಹ ಸಂಪಾದಿಸಿ, ರಜನಿಯನ್ನು ವಿವಾಹವಾಗುವಂತೆ ದಿವಿಲ ಕುಮಾರ್‌ನ ಮನವೊಲಿಸುವುದಾಗಿ ಭರವಸೆ ನೀಡಿದ್ದ. ಆದರೆ ಇಬ್ಬರೂ ಸೇರೆ ತನ್ನ ಮತ್ತು ಮಕ್ಕಳ ಹತ್ಯೆಗೆ ಸಂಚು ರೂಪಿಸಿದ ಸಂಗತಿ ಆ ಅಮಾಯಕ ಯುವತಿಗೆ ಗೊತ್ತೇ ಆಗಿರಲಿಲ್ಲ. ಹತ್ಯೆ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದರು.
ಅವರನ್ನು ಹುಡುಕುವ ಪ್ರಯತ್ನ ವಿಫಲವಾಗಿತ್ತು. ಆದರೆ ಇತ್ತೀಚೆಗೆ ದಿವಿಲ್ ಕುಮಾರ್ ಹಾಗೂ ರಾಜೇಶ್ ಪುದುಚೇರಿಯಲ್ಲಿ ವಾಸವಿದ್ದಾರೆ ಎಂಬ ಸುಳಿವು ದೊರಕಿತ್ತು. ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಪಡೆದಿದ್ದರು. ನಗರದಲ್ಲಿ ಇಬ್ಬರೂ ಶಿಕ್ಷಕಿಯರನ್ನು ವಿವಾಹವಾಗಿ ಮಕ್ಕಳನ್ನೂ ಪಡೆದು ಸಂಸಾರ ಹೊಂದಿದ್ದರು. ಅವರ ಮೇಲೆ ನಿಗಾ ವಹಿಸಿದ ಸಿಬಿಐ ಚೆನ್ನೈ ಘಟಕದ ಸಿಬ್ಬಂದಿ ಶುಕ್ರವಾರ ಇಬ್ಬರನ್ನೂ ಬಂಧಿಸಿ ಕೊಚ್ಚಿಗೆ ಕರೆ ತಂದು ಎರ್ನಾಕುಲಂ ಮುಖ್ಯ ಜ್ಯುಡೀಶಿಯಲ್ ಕೋರ್ಟ್ ಮುಂದೆ ಹಾಜರುಪಡಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top