2 ಅಂತಸ್ತಿನ ಶ್ರೀ ಸಾನ್ನಿಧ್ಯ ಭವನ ನಿರ್ಮಾಣ, ಜ.7ರಂದು ಲೋಕಾರ್ಪಣೆ
ಧರ್ಮಸ್ಥಳ : ದೇಶ-ವಿದೇಶಗಳಿಂದ ಭಕ್ತರು ಆಗಮಿಸುವ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ತೆರಳಲು ತಿರುಪತಿ ಮಾದರಿಯಲ್ಲಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ತಯಾರಾಗಿದೆ. ಕರ್ನಾಟಕದಲ್ಲಿ ಈ ಮಾದರಿಯ ಕ್ಯೂ ವ್ಯವಸ್ಥೆ ಜಾರಿಗೆ ತರುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಸಕಲ ಸೌಲಭ್ಯಗಳನ್ನೊಳಗೊಂಡ ಸರತಿ ಸಾಲಿನ ಸಮುಚ್ಚಯ 2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, 2 ಅಂತಸ್ತು ಹೊಂದಿದೆ. ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ ಅಳವಡಿಸಲಾಗಿದೆ. 16 ವಿಶಾಲ ಭವನಗಳಿದ್ದು, ಸರತಿ ಸಾಲಿನಲ್ಲಿ ಬಂದ ಭಕ್ತರು ವಿಶ್ರಾಂತಿ ಪಡೆಯಬಹುದು. ಪ್ರತಿ ಭವನದಲ್ಲಿ 800 ಮಂದಿ ತಂಗಲು ಅವಕಾಶವಿದೆ. ಜನರು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ವಿಶಾಲವಾದ ಭವನದಲ್ಲಿ ಕುರ್ಚಿಗಳ ಮೇಲೆ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು.
ಭವನಗಳಲ್ಲಿ ಮಕ್ಕಳ ಆರೈಕೆ ಕೊಠಡಿ, ಶೌಚಗೃಹ, ಕ್ಯಾಂಟೀನ್ ಸೌಲಭ್ಯವಿದೆ. ಅಲ್ಲಲ್ಲಿ ಸೂಚನಾ ಫಲಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವೇಶದ್ವಾರದ ಎದುರು ಧರ್ಮಸ್ಥಳದ ಇತಿಹಾಸ ಮತ್ತು ಪರಂಪರೆ ಬಿಂಬಿಸುವ ಆಕರ್ಷಕ ಕಲಾಕೃತಿಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ತಿರುಪತಿ ಮಾದರಿಯಲ್ಲಿ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣವನ್ನು ಧರ್ಮಸ್ಥಳದಲ್ಲಿ ನಿರ್ಮಿಸಲಾಗಿದೆ.
ಜ.7ರಂದು ಲೋಕಾರ್ಪಣೆ
ಜ.7ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ನೂತನ ಸಂಕಿರ್ಣವನ್ನು ಉದ್ಘಾಟಿಸಲಿದ್ದಾರೆ. ಡಾ.ಸುದೇಶ ಧನಕರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹೇಮಾವತಿ ವೀ. ಹೆಗ್ಗಡೆ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸುವರು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.