ಶಿವಮೊಗ್ಗ: ಕೆಲವು ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರ ಸಚಿವ್ ಪಾಂಚಾಳ್ ಡೆತ್‌ನೋಟ್‌ನಲ್ಲಿ ಸ್ವಾಮೀಜಿಗಳು, ಬಿಜೆಪಿ ಶಾಸಕರು ಮತ್ತು ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಗೂಂಡಾಗಳಿಗೆ ಸುಪಾರಿ ನೀಡಲಾಗಿದೆ ಎಂದು ಬರೆದಿದ್ದಾರೆ. ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಸಚಿನ್ ಅವರು ಪ್ರಕರಣನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ರಾಜು ಕಪ್ಪನೂರ್ ಸಚಿವ ಪ್ರಿಯಾಂಕ ಖರ್ಗೆಯ ಎಡಗೈ ಬಂಟ. ಈ ಪುಡಾರಿಯ ಬೆದರಿಕೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಪ್ರಾಮಾಣಿಕ ತನಿಖೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಪ್ರಿಯಾಂಕ್ ಖರ್ಗೆ ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್‌ಗಳನ್ನು ಕರೆಸಿ ಸ್ವಾಮಿಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಶಾಸಕ ಹಾಗೂ ಚಂದು ಪಾಟೀಲ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿರೋಧ ಪಕ್ಷದವರು ಬೆಳೆದರೆ ಇವರ ಬೆಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಹೀಗೆ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮಾತಾಡುತ್ತಿರುವುದು ಸರಿಯಲ್ಲ, ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸ್ನೇಹಿತನಾಗಿ ಸಲಹೆ ಕೊಡುತ್ತಿದ್ದೇನೆ, ನಿಮ್ಮ ಪಾತ್ರ ಇಲ್ಲ ಎಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ. ಸಿಬಿಐ ತನಿಖೆ ಬಗ್ಗೆ ಅನುಮಾನ ಪಡಬೇಡಿ, ಈ ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್‌ಗೆ ಕ್ಲೀನ್ಚಿಟ್ ಕೊಟ್ಟಿದ್ದು ಸಿಬಿಐ. ಜೊತೆಗೆ ನೀವು ಸಿದ್ದರಾಮಯ್ಯರನ್ನು ನಂಬಬೇಡಿ, ನಿಮ್ಮ ವಿರುದ್ದವೇ ನಿಮ್ಮ ಪಕ್ಷದಲ್ಲೆ ಷಡ್ಯಂತ್ರ ನಡೆಯುತ್ತಿದೆ. ನೀವು ಮುಖ್ಯಮಂತ್ರಿ ಆದರೂ ನಮಗೆ ಸಮಸ್ಯೆ ಇಲ್ಲ. ಆದರೆ, ತನಿಖೆಯನ್ನು ಸಿಬಿಐಗೆ ಕೊಡಿ ಎಂದು ವಿಜಯೇಂದ್ರ ಹೇಳಿದ್ದಾರೆ.