ಅಯ್ಯಪ್ಪ ಭಕ್ತರನ್ನು ಮಸೀದಿಗೆ ಬರುವಂತೆ ಮಾಡುವುದು ಷಡ್ಯಂತ್ರ ಎಂದ ಬಿಜೆಪಿ ಎಂಎಲ್‌ಎ
ಹೈದರಾಬಾದ್: ಬೆಳ್ತಂಗಡಿಯಲ್ಲಿ ಶುರುವಾದ ಅಯ್ಯಪ್ಪ ವ್ರತಧಾರಿಗಳ ಮಸೀದಿ ಭೇಟಿ ವಿವಾದ ಈಗ ತೆಲಂಗಾಣಕ್ಕೂ ಹರಡಿದೆ. ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಯಮಿ ಹಾಗೂ ದಾನಿ ಶಶಿಧರ ಶೆಟ್ಟಿ ಬರೋಡ ಅಯ್ಯಪ್ಪನ ಯಕ್ಷಗಾನ ಪ್ರಸಂಗದಲ್ಲಿ ವಾವರ ಪಾತ್ರದ ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪುರಾಣದಲ್ಲಿ ಇಲ್ಲದ ಮುಸ್ಲಿಮ್ ಪಾತ್ರವನ್ನು ಸೇರಿಸಿ ಹಿಂದುಗಳನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂಬ ದಾಟಿಯಲ್ಲಿ ಅವರು ಮಾತನಾಡಿದ್ದು, ಅವರ ಭಾಷಣದ ಈ ವೀಡಿಯೊ ಬಹಳ ವೈರಲ್ ಆಗಿತ್ತು. ಅನಂತರ ಕೆಲವು ಯಕ್ಷಗಾನ ಮೇಳಗಳು ವಾವರ ಪಾತ್ರಕ್ಕೆ ಕತ್ತರಿ ಹಾಕಲು ನಿರ್ಧರಿಸಿವೆ ಎಂದು ವರದಿಯಾಗಿದೆ.
ಇದರ ಮುಂದುವರಿದ ಭಾಗವಾಗಿ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅಯ್ಯಪ್ಪ ವ್ರತಧಾರಿಗಳು ಮಸೀದಿಗಳಿಗೆ ಭೇಟಿ ನೀಡಿದರೆ ವ್ರತಭಂಗವಾಗುತ್ತದೆ ಎಂದು ಹೇಳಿದ್ದಾರೆ. ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ತೀರ್ಥಯಾತ್ರೆಯ ಸಮಯದಲ್ಲಿ ಯಾವುದೇ ಮಸೀದಿಗೆ ಹೋಗಬೇಡಿ ಎಂದು ರಾಜಾ ಸಿಂಗ್ ಹೇಳಿದ್ದಾರೆ.
ಭಕ್ತರು ಅಯ್ಯಪ್ಪ ದೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಲಾಧಾರಿಗಳು ಮಸೀದಿಗೆ ಹೋದರೆ ಅಶುದ್ಧರಾಗುತ್ತಾರೆ. ಭಕ್ತರನ್ನು ಮಸೀದಿಗೆ ಬರುವಂತೆ ಮಾಡಿರುವುದು ಷಡ್ಯಂತ್ರ ಎಂದು ಸಿಂಗ್ ಹೇಳಿದ್ದಾರೆ. ತೆಲಂಗಾಣದ ಗೋಶಾಮಹಲ್ ಶಾಸಕರಾಗಿರುವ ರಾಜಾಸಿಂಗ್ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.