ಕಾಣಿಯೂರು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಜನತೆ ಸಮರ್ಪಣ ಭಾವದಿಂದ ಹೆಚ್ಚು ಭಾಗವಹಿಸುವುದರಿಂದ ಆ ಊರಿನಲ್ಲಿ ನಮ್ಮ ಸಂಸ್ಕೃತಿ ಉಳಿಯುವುದರ ಜೊತೆಗೆ ಸಾಮರಸ್ಯದಿಂದ ಜೀವನ ಮಾಡಲು ಸಾಧ್ಯವಿದೆ ಎಂದು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಶ್ರೀ ಕಾಣಿಯೂರು ರಾಮ ತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು.
ಅವರು ಕಡಬ ತಾಲೂಕಿನ ಕುದ್ಮಾರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ದಾರದ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೂತನ ಗರ್ಭಗುಡಿಯ ಇಷ್ಟಕಾನ್ಯಾಸ ಹಾಗೂ ಗರ್ಭನ್ಯಾಸ, ನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ಸಂಸ್ಕೃತಿ ಉಳಿಯಬೇಕಾದರೆ ಅದರ ಮೂಲವಾಗಿರುವ ಧರ್ಮ ಉಳಿಯಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣವಾಗಬೇಕು. ಹಾಗಾದಾಗ ಮಾತ್ರ ಸುಖ ಶಾಂತಿ ಸಮದ್ಧಿಯ ಸಮಾಜ ನಿರ್ಮಾಣವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವರು, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ಅಂಗಾರ ಮಾತನಾಡಿ, ಭಕ್ತಿ ಮತ್ತು ಭಾವನೆ ಗಟ್ಟಿಯಾಗಿರಬೇಕು. ಭಕ್ತಿಯ ಭಾವನೆ, ಸಮರ್ಪಣೆಯ ಮೂಲಕ ಕಾರ್ಯಸಿದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಕ್ಷೇತ್ರವು ಸಮಯಕ್ಕೆ ಸರಿಯಾಗಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆಯಲಿದೆ. ಇದಕ್ಕೆ ದೇವರ ಅನುಗ್ರಹ ಇರಲಿ ಎಂದರು.
ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬೆಂಗಳೂರು ಸೌಂದರ್ಯ ಎಜ್ಯುಕೇಶನ್ ಟ್ರಸ್ಟ್ ನ ಪಿ ಮಂಜಪ್ಪ, ಉದ್ಯಮಿ ಜಿ. ಕೃಷ್ಣಪ್ಪ, ರಾಮಕುಂಜ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ ಶುಭಹಾರೈಸಿದರು. ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಅನುವಂಶಿಯ ಮೊಕ್ತೇಸರ, ದೇವಸ್ಥಾನದ ಅರ್ಚಕ ಜನೇಶ್ ಭಟ್ ಬರೆಪ್ಪಾಡಿ, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕಾರದ ಶ್ರೀನಿಧಿ ಆಚಾರ್ಯ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಸ್ವಾಗತಿಸಿ, ಲೋಕೇಶ್ ಬಿ. ಎನ್. ವಂದಿಸಿದರು. ಪುರುಷೋತ್ತಮ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು.