ಸಿಡ್ನಿಯಲ್ಲೂ ಸೋತ ಭಾರತ : ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ 3-1 ಅಂತರದ ಗೆಲುವು

ಹತ್ತು ವರ್ಷದ ಬಳಿಕ ಬಾರ್ಡರ್‌-ಗವಾಸ್ಕರ್‌ ಕಪ್‌ ಮೇಲೆ ಹಕ್ಕು ಸಾಧಿಸಿದ ಕಾಂಗರೂ ಪಡೆ

ಸಿಡ್ನಿ : ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಸರಣಿಯ 5ನೇ ತಥಾ ಕೊನೆಯ ಟೆಸ್ಟ್‌ನಲ್ಲೂ ಭಾರತಕ್ಕೆ ಸೋಲಾಗಿದ್ದು, ಹತ್ತು ವರ್ಷಗಳ ಬಳಿ, ಈ ಪ್ರತಿಷ್ಠಿತ ಟೆಸ್ಟ್‌ ಸರಣಿ ಗೆದ್ದುಕೊಂಡು ಆಸ್ಟ್ರೇಲಿಯಾ ಬೀಗಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 3-1 ಅಂತರದಿಂದ ಆಸ್ಟ್ರೇಲಿಯಾ ಪಾಲಾಗಿದೆ. ಭಾರತದ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊನೆಗೂ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಕೊನೆಯ ಬಾರಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದಿದ್ದು 2014-15ರಲ್ಲಿ. ಇದಾದ ಬಳಿಕ ಟೀಮ್ ಇಂಡಿಯಾ ಸತತ 4 ಬಾರಿ ಸರಣಿ ಗೆದ್ದುಕೊಂಡಿತ್ತು. ಇದೀಗ 10 ವರ್ಷಗಳ ಬಳಿಕ ಮತ್ತೆ ಸರಣಿ ವಶಪಡಿಸಿಕೊಳ್ಳುವಲ್ಲಿ ಆಸೀಸ್ ಪಡೆ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಜಸ್​ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಕೇವಲ 185 ರನ್​ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವನ್ನು 181 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾದರು.

ಮೊದಲ ಇನಿಂಗ್ಸ್​ನಲ್ಲಿನ 4 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 33 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 61 ರನ್ ಬಾರಿಸಿದರು.































 
 

ಪಂತ್ ಔಟಾದ ಬಳಿಕ ದಿಢೀರ್ ಕುಸಿತಕ್ಕೊಳಗಾದ ಟೀಮ್ ಇಂಡಿಯಾ ಮೂರನೇ ದಿನದಾಟದ ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು 157 ರನ್​ಗಳಿಗೆ ಸರ್ವಪತನ ಕಂಡಿತು.ಮೊದಲ ಇನಿಂಗ್ಸ್​ನಲ್ಲಿನ 4 ರನ್​ಗಳ ಹಿನ್ನಡೆಯೊಂದಿಗೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 162 ರನ್​ಗಳ ಗುರಿ ಪಡೆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಲು ಬಂದ ಆಸ್ಟ್ರೇಲಿಯಾ ತಂಡಕ್ಕೆ ಯುವ ಸ್ಪೋಟಕ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಭರ್ಜರಿ ಆರಂಭ ಒದಗಿಸಿದರು. ಬೆನ್ನು ನೋವಿನ ಕಾರಣ 3ನೇ ದಿನದಾಟದಲ್ಲಿ ಬುಮ್ರಾ ಕೂಡ ಕಣಕ್ಕಿಳಿದಿರಲಿಲ್ಲ. ಇದರ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯನ್ನರು ಮೊದಲ ಮೂರು ಓವರ್​​ಗಳಲ್ಲೇ 35 ರನ್ ಚಚ್ಚಿದರು.
ಟೀಮ್ ಇಂಡಿಯಾ 4 ವಿಕೆಟ್ ಕಬಳಿಸಿದರೂ ಆಸ್ಟ್ರೇಲಿಯಾ ತಂಡವು ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಅದರಂತೆ ಮೂರನೇ ದಿನದಾಟದಲ್ಲೇ 162 ರನ್​​ಗಳ ಗುರಿ ಮುಟ್ಟುವ ಮೂಲಕ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯನ್ನು ಆಸ್ಟ್ರೇಲಿಯಾ 3-1 ಅಂತರದಿಂದ ಗೆದ್ದುಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top