ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ನ ನೂತನ ಸಭಾಭವನ ಉದ್ಘಾಟನೆ

ಪುತ್ತೂರು : ಯಾವುದೇ ಸಮುದಾಯದಲ್ಲೂ ಕೇವಲ ಸಂಘ ಸಂಸ್ಥೆಗಳಿದ್ದರೆ ಸಾಲದು. ಬದಲಾಗಿ ಸಂಘ ಸಂಸ್ಥೆಗಳಲ್ಲಿರುವವರು ಭೌತಿಕ ಹಾಗೂ ಆರ್ಥಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ಕಟ್ಟಿ ತಾನೂ ಬೆಳೆಯಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ನುಡಿದರು.

ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಯಾವುದೇ ಕಾಲದಲ್ಲೂ ಅಣು ಸ್ಥಿರವಾಗಿ ನಿಲ್ಲುವುದಿಲ್ಲ. ಬದಲಾವಣೆಯೇ ಸ್ಥಿರವಾಗಿ ನಿಲ್ಲುವುದು. ಅದೇ ರೀತಿ ಮನುಷ್ಯ ಜೀವನವೂ ಸ್ಥಿರವಾಗಿ ನಿಲ್ಲುವುದಿಲ್ಲ. ಪ್ರಸ್ತುತ 21ನೇ ಶತಮಾನದಲ್ಲಿ ದೇಶ ಸೇವೆಗೆ, ನಾಡು ಕಟ್ಟುವ ಕೈಂಕರ್ಯದಲ್ಲಿ ಒಕ್ಕಲಿಗರ ಪಾತ್ರವೂ ಇದೆ ಎಂದ ಸ್ವಾಮೀಜಿಯವರು, ಯಾವುದೇ ಕಾರ್ಯಕ್ರಮಗಳು ದೇಶಕ್ಕೆ, ದೇಶದ ಪ್ರಗತಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಬೇಕು ಎಂದು ನುಡಿದರು. ಯಾವುದೇ ಒಂದು ಜನಾಂಗ  ಉದ್ಧಾರವಾಗಬೇಕಾದರೆ ಆಯಾ ಜನಾಂಗದಲ್ಲಿ ಕಲೆ, ಸಾಹಿತ್ಯ, ಡಾಕ್ಟರ್, ಲಾಯರ್, ಕೃಷಿಕರು, ಜ್ಞಾನಿಗಳು, ವಿಜ್ಞಾನಿಗಳು ಆಗಿರಬೇಕು. ಈ ನಿಟ್ಟಿನಲ್ಲಿ ಒಕ್ಕಲಿಗ  ಸಮುದಾಯದಿಂದ ಶ್ರೇಷ್ಠ ಜ್ಞಾನಿಗಳು, ವಿಜ್ಞಾನಿಗಳು, ಸಾಹಿತಿಗಳು, ಕವಿಗಳು ಹೊರಹೊಮ್ಮಬೇಕು ಎಂದು ನುಡಿದರು.

ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ































 
 

ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ನೂರಾರು ಸಮಾಜ, ಸಂಘಟನೆಗಳಿಗೆ ಮಾದರಿ ಸಂಘಟನೆ ಇದ್ದರೆ ಅದು ಪುತ್ತೂರು ಸಂಘಟನೆ. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಹಿರಿಯ ಆದರ್ಶ ದಂಪತಿಗಳಿಗೆ ಅವರ ಮನೆಗೆ ತೆರಳಿ ಅವರ ಹೃದಯವನ್ನು ತಟ್ಟುವ ಕೆಲಸ ಮಾಡಿರುವುದು ಶ್ಲಾಘನೀಯ. ಪ್ರಸ್ತುತ ಹಿರಿಯರ ಆದರ್ಶಗಳು ಯುವ ಜನಾಂಗಕ್ಕೆ ಬೇಕಿದೆ. ಒಳ್ಳೆಯ ಯುವ ಪ್ರತಿಭೆಗಳನ್ನು ಗುರುತಿಸಲಾಗಿದೆ. ತಾನು ಮಾಡಿದ ಕಾರ್ಯತತ್ಪರತೆಗೆ ಸಿಗುವ ಗೌರವ, ಮನ್ನಣೆ ಅದೇ ಸಾರ್ಥಕ್ಯ ಜೀವನ. ಗುರುತಿಸುವ ಕೆಲಸ ಮಾಡಿದರೆ ಮಾತ್ರ ಆ ಸಂಘ ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ನುಡಿದ ಅವರು, ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತನ್ನ ಆಂತರ್ಯ ಶೋಧನೆ ಮಾಡಬೇಕು. ಮಾಡದಿದ್ದರೆ ಅದು ಸಾರ್ಥಕ್ಯ ಬದುಕೇ ಅಲ್ಲ. ನಮ್ಮಲ್ಲಿ ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯವಾಗುತ್ತದೆ. ಸಂಘ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು. 

ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ

ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತಾ ಸುರೇಂದ್ರ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಠ, ಮಂದಿರಗಳು ಬೆಳೆಯುತ್ತಿದೆ. ಹಾಗೆಯೇ ಜನಾಂಗವೂ ಬೆಳೆಯಬೇಕು. ಸ್ವಸಹಾಯ ಗುಂಪು ಎನ್ನುವುದು ಹತ್ತು ಜನರನ್ನು ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುವುದು. ನಮ್ಮ ಜನಾಂಗ ದೇಶದಲ್ಲಿ, ರಾಜ್ಯದಲ್ಲಿ ಸಾಕಷ್ಟಿದೆ. ಈ ಮೂಲಕ ಸಾವಿರಾರು ಸಂಘ ಸಂಸ್ಥೆಗಳು ಹೊರಗೆ ಬರಬೇಕು. ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರಂತವರು ಹುಟ್ಟುಬೇಕು ಎಂದರು.

ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು

ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಗೌಡ ಸಮಾಜ ಯಾವಾಗ ಅಸ್ತಿತ್ವಕ್ಕೆ ಬಂತೋ ಅಲ್ಲಿಂದ ಸಾಂಸ್ಕೃತಿಕ, ಆಚಾರ ವಿಚಾರಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಗುರು ಮತ್ತು ಗುರಿಯಲ್ಲಿ ಸ್ಪಷ್ಟತೆ ಇದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು. ಈ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯ ಇತರ ಸಮಾಜಕ್ಕೆ ಮಾದರಿಯಾಗಿದೆ. ಒಕ್ಕಲಿಗ ಸಮಾಜ ಇತಿಹಾಸವನ್ನು ನೆನಪಿಸಲು ಸಂಘಟನೆ ಮೂಲಕ ಕಾರ್ಯಪವೃತ್ತವಾಗಿದೆ. ಇಂದು ಸಮುದಾಯದ ಕಟ್ಟಕಡೆಯವ ವ್ಯಕ್ತಿ ಸ್ವಾವಲಂಬಿಯಾಗಿ ಬದುಕಲು ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘವನ್ನು ಕಟ್ಟಿ ಈಡೇರಿಸಲಾಗಿದೆ ಎಂದರು.

50 ವರ್ಷ ಪೂರೈಸಿದ ದಂಪತಿಗಳಿಗೆ ಸನ್ಮಾನ ಎಲ್ಲಾ ಸಮಾಜಕ್ಕೆ ಮಾದರಿ : ಎ.ವಿ.ನಾರಾಯಣ

ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎ.ವಿ.ನಾರಾಯಣ ಮಾತನಾಡಿ, ತಿಂಗಳಿಗೆ ಒಂದು ಕಾರ್ಯಕ್ರಮದಂತೆ ಒಟ್ಟು 12 ಆನ್ಲೈನ್ ಕಾರ್ಯಕ್ರಮ. ಮುಖ್ಯವಾಗಿ 50 ವರ್ಷಕ್ಕಿಂತ ಮೇಲ್ಪಟ್ಟು ಜೀವನ ನಡೆಸಿದ ಆದರ್ಶ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಇದು ಎಲ್ಲಾ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಒಕ್ಕಲಿಗ ಸಮಾಜದ ಜತೆ ಎಲ್ಲಾ ಸಮಾಜ ಬೆಳೆಯಬೇಕು : ಮೋಹನ ಗೌಡ ಇಡ್ಯಡ್ಕ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಮಾತನಾಡಿ, ಎಲ್ಲಾ ಸಮಾಜ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಮುಖ್ಯವಾಗಿ ಯುವ ಸಮಾಜ ಮುಂದೆ ಬರಬೇಕಿದೆ. ಪುತ್ತೂರು ಸಂಘ ಮಾದರಿ ಸಂಘವಾಗಿದೆ.

ದಶಮಾನೋತ್ಸವ ಸಂಭ್ರಮದಿಂದ ಧನ್ಯತಾಭಾವ ತುಂಬಿದೆ : ಗೋಪಾಲಕೃಷ್ಣ  ಪಟೇಲ್‍ ಚಾರ್ವಾಕ

ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ  ಪಟೇಲ್‍ ಚಾರ್ವಾಕ ಮಾತನಾಡಿ, ದಶಮಾನೋತ್ಸವ ಸಂಭ್ರಮದಿಂದ ಧನ್ಯತಾಭಾವ ತುಂಬಿದೆ. ಆದರ್ಶ ದಂಪತಿಗಳನ್ನು ಗೌರವಿಸಿರುವುದು ಇತರ ಸಮಾಜಕ್ಕೆ ಮಾದರಿಯಾಗಿ ಮೂಡಿ ಬಂದಿದೆ. ಯಾವುದೇ ಸಂಘ ನಮ್ಮ ಹೆಸರಿಗಾಗಿ ಅಲ್ಲ ನಮ್ಮ ಅಸ್ಮಿತೆಗಾಗಿ ಇರಬೇಕು. ಸಂಘ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ ನಾವು ಸಂಘಕ್ಕೆ ಏನು ನೀಡಿದ್ದೇವೆ ಎಂಬುದನ್ನುಅರಿತುಕೊಳ್ಳಬೇಕು ಎಂದರು.

ಸಹಕಾರ, ಸಹಬಾಳ್ವೆ, ನಾಯಕತ್ವ ಗುಣ ಟ್ರಸ್ಟ್ ನ ಉದ್ದೇಶ : ಡಿ.ವಿ.ಮನೋಹರ್

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ್ ಮಾತನಾಡಿ, ಸಾಮಾಜಿಕ, ಆರ್ಥಿಕ ಸದೃಢದಿಂದ ಟ್ರಸ್ಟ್ ರಚನೆಯಾಗಿದೆ. ಪರಸ್ಪರ ಸಹಕಾರ, ಸಹಬಾಳ್ವೆ, ನಾಯಕತ್ವ ಗುಣ ಬೆಳೆಸುವುದು, ಆಚಾರ-ವಿಚಾರ ಸಂಸ್ಕೃತಿಯನ್ನು ಬೆಳೆಸುವುದು ಟ್ರಸ್ಟ್ ನ ಮುಖ್ಯ ಉದ್ದೇಶವಾಗಿದೆ. ಟ್ರಸ್ಟನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ  ತೃಪ್ತಿ ಇದೆ ಎಂದರು.

ಗುಂಪು ರಚನೆಯಲ್ಲಿ ಗುಂಪುಗಾರಿಕೆ ಇರಬಾರದು : ಸುರೇಶ್ ಬೈಲು

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಒಕ್ಕಲಿಗ ಸಮುದಾಯದಲ್ಲಿ ಈಗಾಗಲೇ 1050 ಗುಂಪುಗಳಿವೆ. ಆದರೆ ಈ ಗುಂಪು ಮತ್ತಷ್ಟು ರಚನೆಯಾಗಲಿ. ಗುಂಪು ರಚನೆಯಾಗುವಲ್ಲಿ ಗುಂಪುಗಾರಿಕೆ ಇರದೆ ಆರೋಗ್ಯಕರವಾದ ಗುಂಪು ರಚನೆಯಾಗಲಿ ಎಂದ ಅವರು, ಸಮುದಾಯವನ್ನು ಒಳಿತಿನಡೆಗೆ ಸಾಗುವಲ್ಲಿ ಮಹತ್ತರ ಜವಾಬ್ದಾರಿ ಗುರುಗಳಿಗೆ ಹಾಗೂ ಹಿರಿಯರಿಗಿದೆ. ನಮ್ಮ ಸಮುದಾಯದಲ್ಲಿ ಸಮರ್ಥ ಗುರುವಿನ ಜೊತೆ ಸಮರ್ಥ ನಾಯಕರಿದ್ದಾರೆ. ಮಹಿಳಾ ಸಂಘವನ್ನು ರಚಿಸಿ ಒಟ್ಟುಗೂಡಿಸಿ ಮಹಿಳೆಯರನ್ನು ಸಮಾಜದಲ್ಲಿ ಬೆಳೆಸುವಲ್ಲಿ ಪುತ್ತೂರು ಒಕ್ಕಲಿಗ ಗೌಡ ಯಶಸ್ವಿ ಕಂಡಿದೆ ಎಂದರು.

ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮಹಿಳಾ ಘಟಕದ  ಅಧ್ಯಕ್ಷೆ ವಾರಿಜ ಬೆಳ್ಳಿಯಪ್ಪ, ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಮ್. ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಾಜದ ಕುಶಾಲಪ್ಪ ಗೌಡ (ಉದ್ಯಮ), ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತಿ (ಕ್ರೀಡೆ), ಪ್ರೊ.ವಸಂತಿ (ಶಿಕ್ಷಕ) ಅವರಿಗೆ ಶ್ರೀ ಸ್ವಾಮೀಜಿಯವರು ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು.

ದಶಮಾನೋತ್ಸವ ಸ್ಮರಣ ಸಂಚಿಕೆ ಸಮಿತಿಯ ಎಸ್.ವಸಂತ ವೀರಮಂಗಲ, ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸ್ವಾಮೀಜಿಯವರಿಗೆ ಗೌರವಾರ್ಪಣೆ ಮಾಡಿದರು. ಸಮಾರಂಭದಲ್ಲಿ ‘ ದಶಸ್ಮೃತಿ’ ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು. ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬರೆದ ‘ಕರಾವಳಿಯ ಒಕ್ಕಲಿಗರು’ ಪುಸ್ತಕ ಬಿಡುಗಡೆ ಮಾಡಲಾಯಿತು.

ಒಕ್ಕಲಿಗರ ಗೀತೆ ರಚಿಸಿದ ಪದ್ಮಯ್ಯ ಗೌಡ, ರಾಗ ಸಂಯೋಜನೆ ಮಾಡಿದ ಪದ್ಮರಾಜ್ ಅವರನ್ನು ಸ್ವಾಮೀಜಿಯವರು ಗೌರವಿಸಿದರು. ಸಾಂಪ್ರದಾಯಿಕ ನೃತ್ಯಗಾತಿ ಶೃತಿ ಕುಮಾರಿ ಅವರಿಗೆ ಗೌರವಾರ್ಪಣೆ ನಡೆಯಿತು. ಕುಕ್ಕುಟ ಉದ್ಯಮಿ ಸಿಲ್ವಿಯಾ ಪಾಯಸ್ ಅವರು ಗೌಡ ಸಮುದಾಯದ ಇಬ್ಬರಿಗೆ ನೀಡಿದ ಸಹಾಯಧನವನ್ನು ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹಸ್ತಾಂತರಿಸಿದರು. ಒಕ್ಕಲಿಗ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಪ್ರವೀಣ್ ಕುಂಟ್ಯಾನ, ಎ.ವಿ.ನಾರಾಯಣ, ಪುರುಷೋತ್ತಮ ಮುಂಗ್ಲಿಮನೆ, ರಾಧಾಕೃಷ್ಣ ನಂದಿಲ, ನಾಗೇಶ್ ಕೆಡೆಂಜಿ, ಅಮರನಾಥ ಬಪ್ಪಳಿಗೆಯವರನ್ನು ಗೌರವಿಸಲಾಯಿತು. ಒಕ್ಕಲಿಗ ಸಭಾಭವನಕ್ಕೆ 10 ಸಾವಿರಕ್ಕೂ ಮೇಲ್ಪಟ್ಟು ಧನಸಹಾಯ ನೀಡಿದವರನ್ನು ಗೌರವಿಸಲಾಯಿತು. ಒಕ್ಕೂಟದ ಸುಮಲತಾ ಈ ಕಾರ್ಯಕ್ರಮ ನೆರವೇರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ‘ರಾಣಿ ಶಶಿಪ್ರಭೆ’ ಪ್ರದರ್ಶನಗೊಂಡಿತು.

ನೂತನ ಸಭಾಭವನ ಉದ್ಘಾಟನೆ :

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ ಪುತ್ತೂರಿಗೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದರು. ಬಳಿಕ ನೆಲ್ಲಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಭಾಭವನವನ್ನು ತನ್ನ ದಿವ್ಯಹಸ್ತದಿಂದ ಉದ್ಘಾಟಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top