ಲೀಟರಿಗೆ 8-10 ರೂ. ಹೆಚ್ಚಿಸಲು ಪ್ರಸ್ತಾವ
ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಿ ಶಾಕ್ ನೀಡಿರುವ ರಾಜ್ಯ ಸರ್ಕಾರ, ಇದೀಗ ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ. ಹಾಲಿನ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆ ಹಾಲಿನ ದರ ಲೀಟರ್‌ಗೆ ರೂ.8 ರಿಂದ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ರೈತರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇದಿನೆ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಇತ್ತೀಚೆಗೆ, ರಾಮನಗರ ಜಿಲ್ಲೆಯ ಮಾಗಡಿಯ ಕೆಲವು ಹೈನುಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಾಲಿನ ಬೆಲೆಯನ್ನು ಲೀಟರ್‌ಗೆ 5 ರೂ. ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು.
ಹಾಲಿನ ಬೆಲೆಯನ್ನು ಕಳೆದ ಆಗಸ್ಟ್ 2023ರಲ್ಲಿ 3 ರೂ. ಹೆಚ್ಚಿಸಲಾಗಿತ್ತು. ನಂತರ ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಿಸಲಾಯಿತು. ಜೂನ್‌ನಲ್ಲಿ ಮತ್ತೆ 2 ರೂ. ಹೆಚ್ಚಿಸಲಾಯಿತು, ಬಳಿಕ ಹೆಚ್ಚುವರಿಯಾಗಿ 50 ಮಿಲಿಲೀಟರ್ ನೀಡಲಾಯಿತು. ಇದೀಗ ಮತ್ತೊಮ್ಮೆ ಹಾಲಿನ ಬೆಲೆ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ. ಇದರೊಂದಿಗೆ ಮೊಸರು ಸೇರಿದಂತೆ ನಂದಿನಿಯ ಎಲ್ಲ ಡೈರಿ ಉತ್ಪನ್ನಗಳ ಬೆಲೆ ಏರಲಿದೆ ಎನ್ನಲಾಗಿದೆ.