ಒಂದು ವರ್ಷದಿಂದ ಬಿಲ್ಗಾಗಿ ಅಲೆದಾಡುತ್ತಿರುವ ಗುತ್ತಿಗೆದಾರ
ಬೆಂಗಳೂರು: ಬಿಲ್ ಪಾಸ್ ಆಗದೆ ಕಂಗಾಲಾಗಿರುವ ಸರಕಾರಿ ಗುತ್ತಿಗೆದಾರರೊಬ್ಬರು ಒಂದೋ ಬಿಲ್ ಪಾಸ್ ಮಾಡಿಸಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮನವರಿಗೆ ಪತ್ರ ಬರೆದಿದ್ದಾರೆ. ಬಿಟ್ಟಿ ಭಾಗ್ಯಗಳಿಂದ ರಾಜ್ಯ ದಿವಾಳಿಯಾಗಿದ್ದು, ಕಾಮಗಾರಿ ಮಾಡಲು ಸರಕಾರದ ಬಳಿ ಹಣ ಇಲ್ಲ ಎಂಬ ಕೂಗು ಕೇಳಿಸುತ್ತಿರುವಾಗಲೇ ನಡೆದಿರುವ ಈ ಬೆಳವಣಿಗೆ ವಿಪಕ್ಷದ ಕೈಗೆ ಇನ್ನೊಂದು ಅಸ್ತ್ರವಾಗಿ ಸಿಕ್ಕಿದೆ.
ದಾವಣಗೆರೆ ಜಿಲ್ಲೆಯ ಹರಿಹರದ ಕ್ಲಾಸ್ ಒನ್ ಗುತ್ತಿಗೆದಾರ ಮೊಹಮ್ಮದ್ ಮಝರ್ ಎಂಬವರು ಈ ಪತ್ರ ಬರೆದಿದ್ದಾರೆ. ಮುಸ್ಲಿಂ ಖಬರಿಸ್ಥಾನದಲ್ಲಿ ಅವರು 25 ಲ.ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದು, ಒಂದು ವರ್ಷವಾದರೂ ಸರಕಾರ ಇದರ ಬಿಲ್ ಪಾಸ್ ಮಾಡಿಲ್ಲ. ಬಿಲ್ ಪಾಸ್ ಮಾಡಿಸಲು ಸರಕಾರಿ ಕಚೇರಿಗಳಿಗೆ ಅಲೆದು ಕಂಗಾಲಾಗಿರುವ ಮಝರ್ ಕಳೆದ ಗುರುವಾರ ನೇರವಾಗಿ ಸಿದ್ದರಾಮಯ್ಯನವರಿಗೆ ದಯಾಮರಣವನ್ನಾದರೂ ಕೊಡಿ ಎಂದು ಪತ್ರ ಬರೆದಿದ್ದಾರೆ.
ಸಾಲ ತೆಗೆದುಕೊಂಡು ಕಾಮಗಾರಿ ಮಾಡಿದ್ದೇನೆ. ಈಗಾಗಲೇ ಸಾಲಕ್ಕೆ 3 ಲಕ್ಷದಷ್ಟು ಬಡ್ಡಿ ಪಾವತಿಸಿದ್ದೇನೆ. ಅಧಿಕಾರಿಗಳು ದಿನಕ್ಕೊಂದು ನೆಪ ಹೇಳಿ ಬಿಲ್ ಪಾಸ್ ಮಾಡುವುದನ್ನು ಮುಂದೂಡುತ್ತಿದ್ದಾರೆ ಎಂದು ಮಝರ್ ಅಳಲು ತೋಡಿಕೊಂಡಿದ್ದಾರೆ.