ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ದಾಖಲೆಯಾಗಿ ಸ್ಮಾರ್ಟ್‌ಕಾರ್ಡ್ ಬಳಕೆ
ಬೆಂಗಳೂರು: ಶಕ್ತಿ ಯೋಜನೆಯಡಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಪ್ರತಿಸಲ ಆಧಾರ್ ಕಾರ್ಡ್ ಒಯ್ದು ನಿರ್ವಾಹಕರಿಗೆ ತೋರಿಸುವ ಕಷ್ಟವನ್ನು ತಪ್ಪಿಸುವ ಸಲುವಾಗಿ ಸರಕಾರ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ. ಶಕ್ತಿ ಯೋಜನೆಯನ್ನು ಸರಳೀಕರಿಸುವ ಪ್ರಕ್ರಿಯೆಯಂಗವಾಗಿ ಶೀಘ್ರದಲ್ಲೇ ಎಲ್ಲ ಫಲಾನುಭವಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಪ್ರತಿ ಸಲ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸಬೇಕಾಗುತ್ತದೆ. ಕಂಡಕ್ಟರ್ ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಿ ಅವರು ಕರ್ನಾಟಕದವರೇ ಎಂದು ಖಾತರಿಪಡಿಸಿ ಶೂನ್ಯ ಮೊತ್ತಕ್ಕೆ ಟಿಕೆಟ್ ನೀಡಬೇಕಾಗುತ್ತದೆ. ಇದರಿಂದ ಕಂಡಕ್ಟರ್‌ಗಳ ಸಮಯ ಕೂಡ ವ್ಯರ್ಥವಾಗುತ್ತಿದ್ದು, ಭಾರಿ ರಶ್ ಇರುವ ಸಮಯದಲ್ಲಿ ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಿ ಟಿಕೆಟ್ ನೀಡುವ ಸಲುವಾಗಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸಬೇಕಾಗುತ್ತದೆ. ಈ ಪರಿಶೀಲನೆಗೆ ಸಾಕಷ್ಟು ಸಮಯ ಬೇಕಾಗುತ್ತಿದ್ದು, ಬಸ್‌ಗಳು ಸಮಯಕ್ಕೆ ಸರಿಯಾಗಿ ಓಡಲು ತೊಂದರೆಯಾಗುತ್ತಿರುವ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಫಲಾನುಭವಿ ಮಹಿಳೆಯರಿಗೆ ಶಕ್ತಿ ಕಾರ್ಡ್ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಆಧಾರ್ ಪರಿಶೀಲನೆ ವೇಳೆ ಮಹಿಳಾ ಪ್ರಯಾಣಿಕರು ಕಂಡಕ್ಟರ್‌ಗಳ ನಡುವೆ ಜಗಳವಾಡುವುದು, ಕರ್ನಾಟಕದ ನಿವಾಸಿಗಳಲ್ಲದ ಮಹಿಳೆಯರೂ ಉಚಿತವಾಗಿ ಪ್ರಯಾಣಿಸಲು ಹವಣಿಸುವಂಥ ಘಟನೆಗಳು ನಡೆಯುತ್ತಿರುತ್ತವೆ. ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿದರೆ ನಿರ್ವಾಹಕರ ಕೆಲಸ ಸುಲಭವಾಗಲಿದೆ. ಒಟ್ಟು ಫಲಾನುಭವಿಗಳ ಬಗ್ಗೆ ಸ್ಪಷ್ಟ ಚಿತ್ರಣವೂ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 11, 2023ರಿಂದ ಶಕ್ತಿ ಯೋಜನೆ ಪ್ರಾರಂಭವಾಗಿದ್ದು, ಕಳೆದ ಡಿಸೆಂಬರ್‌ವರೆಗೆ ಯೋಜನೆಯಡಿಯಲ್ಲಿ 356 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರ ಟಿಕೆಟ್ ಮೌಲ್ಯ 8,598 ಕೋಟಿ ರೂ. ಆಗಿದೆ.