ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದ ಘಟನೆ
ತುಮಕೂರು : ದೂರು ನೀಡಲು ಕಚೇರಿಗೆ ಬಂದ ಮಹಿಳೆಯ ಜೊತೆ ಡಿವೈಎಸ್‌ಪಿ ದರ್ಜೆಯ ಪೊಲೀಸ್ ಅಧಿಕಾರಿಯೇ ಅಸಭ್ಯವಾಗಿ ವರ್ತಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದು, ವೀಡಿಯೊ ವೈರಲ್ ಆದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ.
ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆ ಪಾವಗಡದಿಂದ ಡಿವೈಎಸ್ಪಿ ಕಚೇರಿಗೆ ಬಂದಿದ್ದರು. ಮಹಿಳೆಯನ್ನು ಏಕಾಂತ ಕೊಠಡಿಗೆ ಕರೆದುಕೊಂಡು ಹೋದ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ. ಡಿವೈಎಸ್ಪಿ ಕಚೇರಿಗೆ ಮಹಿಳೆಯ ಜೊತೆ ಆಗಮಿಸಿದ್ದ ಅನಿಲ್ ಎಂಬವರು ಮೊಬೈಲ್‌ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ ಎಂದು ಶಂಕಿಸಲಾಗಿದೆ. ವಾಟ್ಸಪ್ ಮೂಲಕ ವೀಡಿಯೊ ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಡಿವೈಎಸ್ಪಿ ರಾಮಚಂದ್ರಪ್ಪ ತಲೆಮರೆಸಿಕೊಂಡಿದ್ದಾರೆ.
ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿಯೇ ಈ ಕೃತ್ಯ ನಡೆದಿರುವುದು ಇಡೀ ಪೊಲೀಸ್ ಇಲಾಖೆಯೆ ತಲೆ ತಗ್ಗಿಸುವಂತೆ ಮಾಡಿದೆ. ಪೊಲೀಸರ ಈ ವರ್ತನೆ ಇಲಾಖೆಯ ಘನತೆಗೆ ಮಸಿ ಬಳಿದಿದೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊವನ್ನು ನಾನೂ ವೀಕ್ಷಿಸಿದ್ದೇನೆ. ಅದರಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸಂತ್ರಸ್ತೆಯನ್ನು ಹುಡುಕುತ್ತಿದ್ದೇವೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತುಮಕೂರು ಎಸ್‌ಪಿ ಕೆ.ವಿ. ಅಶೋಕ್ ಪ್ರತಿಕ್ರಿಯಿಸಿದ್ದಾರೆ.