ಆಸ್ಪತ್ರೆ, ಸ್ಮಶಾನಗಳು ತುಂಬಿ ತುಳುಕುತ್ತಿರುವ ವೀಡಿಯೊಗಳು ವೈರಲ್
ಬೀಜಿಂಗ್ : ಇಡೀ ಜಗತ್ತಿಗೆ ಕೊರೊನ ವೈರಸ್ ಹರಡಿ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲಿ ಐದು ವರ್ಷಗಳ ಬಳಿಕ ಇದೇ ಮಾದರಿಯ ಇನ್ನೊಂದು ವೈರಸ್ ಕಾಣಿಸಿಕೊಂಡಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಎಕ್ಸ್, ಫೇಸ್‌ಬುಕ್, ವಾಟ್ಸಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಈ ವೈರಸ್ ಕುರಿತು ಚರ್ಚೆಯಾಗುತ್ತಿದೆ. ಕೆಲವರು ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ, ಸ್ಮಶಾನಗಳಲ್ಲಿ ಸಾಲಾಗಿ ಹೆಣಗಳನ್ನು ಇಟ್ಟಿರುವ ವೀಡಿಯೊಗಳನ್ನು ಹಂಚಿಕೊಂಡು ಇದು ಕೊರೊನ ಹಾವಳಿಯ ಐದು ವರ್ಷದ ಬಳಿಕ ಚೀನಾದಲ್ಲಿ ಇನ್ನೊಂದು ವೈರಸ್‌ನಿಂದ ಉಂಟಾದ ಪರಿಸ್ಥಿತಿ ಎಂದು ಬರೆದುಕೊಂಡಿದ್ದಾರೆ. ಆದರೆ ಈ ವೀಡಿಯೊಗಳ ಸಾಚಾತನ ಇನ್ನೂ ದೃಢಪಟ್ಟಿಲ್ಲ.
ಇನ್‌ಫ್ಲುಯೆನ್ಸ ಎ, ಮೈಕೊಪ್ಲಾಸ್ಮ ನ್ಯುಮೊನಿಯ ಜೊತೆಗೆ ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯುಮೊವೈರಸ್ HMPV) ಎಂಬ ಹೊಸತಳಿಯ ವೈರಸ್ ಒಂದು ಚೀನಾದಲ್ಲಿ ಏಕಾಏಕಿ ಹಬ್ಬಿದೆ. ಇದರಿಂದಾಗಿ ಚೀನಾದ ಜನ ದಂಡುದಂಡಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ವೀಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಕೆಲವರು, ಆಸ್ಪತ್ರೆಗಳು ಮತ್ತು ಸ್ಮಶಾನಗಳು ತುಂಬಿಹೋಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನರು ಆಸ್ಪತ್ರೆಗಳಲ್ಲಿ ಕಿಕ್ಕಿರಿದು ತುಂಬಿರುವ ವೀಡಿಯೊಗಳು ಹರಿದಾಡುತ್ತಿವೆ.
ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಎಂದು ಕೆಲವರು ಹೇಳಿಕೊಂಡಿದ್ದಾರೆ. ಆದರೆ ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ. HMPV ರೋಗಲಕ್ಷಣ ಕೋವಿಡ್‌ನಂತೆಯೇ ಇದೆ. ಆದರೆ ಕೋವಿಡ್‌ಗಿಂತಲೂ ಇದು ಅಪಾಯಕಾರಿಯಾಗಿದೆ. ನಿರ್ದಿಷ್ಟವಾಗಿ ವಯಸ್ಸಾದವರು ಮತ್ತು ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂದು ಕೆಲವರು ಎಚ್ಚರಿಸಿದ್ದಾರೆ.
ಚೀನಾದ ರೋಗ ನಿಯಂತ್ರಣ ಪ್ರಾಧಿಕಾರ ಈ ಹೊಸ ವೈರಸ್ ಸೃಷ್ಟಿಯಾಗಿರುವುದನ್ನು ನಿರಾಕರಿಸಿದ್ದು, ಚಳಿಗಾಲದಲ್ಲಿ ಜ್ವರದಂಥ ರೋಗಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ. ಹೀಗಾಗಿ ಜನರು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಪರಿಸ್ಥಿತಿಯ ಮೇಲೆ ಸೂಕ್ಷ್ಮ ನಿಗಾ ಇಟ್ಟಿದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಈ ವೈರಸ್ ಬಗ್ಗೆ ಹೇಳಿಕೆ ನೀಡಿಲ್ಲ.
2019ರಲ್ಲಿ ಕೊರೊನ ವೈರಸ್ ಮೊದಲು ಚೀನದಲ್ಲಿ ಕಾಣಿಸಿಕೊಂಡು ಬಳಿಕ ಇಡೀ ಜಗತ್ತಿಗೆ ಹರಡಿತ್ತು. ಆದರೆ ಇಂದಿಗೂ ಚೀನ ಕೊರೊನ ವೈರಸ್ ತಾನು ಹರಡಿರುವುದನ್ನು ಒಪ್ಪಿಕೊಂಡಿಲ್ಲ.