ಪುತ್ತೂರು: ಹಿರೇಬಂಡಾಡಿಯಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್ ನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಯವರು ಟ್ಯಾಕ್ಸ್ ಕಲೆಕ್ಷನ್ ಎಂಬ ಶಬ್ದವನ್ನು ಬಳಸಿ ಮಾಜಿ ಶಾಸಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದು, ಈ ಕುರಿತು ನೀವು ಕೊಡುವ ಸರ್ಟಿಫಿಕೇಟ್ ಅಗತ್ಯವಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು, ಮಾಜಿ ಶಾಸಕರ ರಾಜಕೀಯ ಜೀವನದ 35 ವರ್ಷಗಳ ಬಗ್ಗೆ ಹಿರೇಬಂಡಾಡಿ ಜನರಿಗೆ ತಿಳಿದಿದೆ ಎಂದು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೌಕತ್ ಅಲಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೇರೆಯವರ ಬಗ್ಗೆ ವೃಥಾ ಆರೋಪ ಮಾಡುತ್ತಾ ಯಾವುದೇ ಮೂಲಭೂತ ಸೌಕರ್ಯ, ಅಭಿವೃದ್ಧಿಗಳಿಗೆ ಅನುದಾನ ತರಲು ಸಾಧ್ಯವಾಗದೇ ಕಳೆದ ಒಂದೂವರೆ ವರ್ಷಗಳಿಂದ ಕೇವಲ ಘೋಷಣೆಗಳನ್ನು ಮಾಡುತ್ತಾ ಬೂಟಾಟಿಕೆ ರಾಜಕಾರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಪ್ರಚಾರ ಪಡಿಸುವುದನ್ನು ನಿಲ್ಲಿಸಲಿ. ಇವೆಲ್ಲವನ್ನು ಮರೆಮಾಚಲು ನೀವು ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಇದು ಜನರು ನಂಬುವ ವಿಷಯವಲ್ಲ ಎಂದು ಹೇಳಿದರು.
2023 ಮಾರ್ಚ್31 ಕ್ಕೆ ಅಕ್ರಮ-ಸಕ್ರಮ ಹೊಸ ಅರ್ಜಿ ನೀಡುವ ಪ್ರಕ್ರಿಯೆ ನಿಂತು ಹೋಗಿರುವುದು ನಮಗೆ ತಿಳಿದಿರುವ ವಿಷಯ. ಅದರ ಬಳಿಕ ಶಾಸಕರು ಯಾರು ಎನ್ನುವುದನ್ನು ನೀವು ತಿಳಿದುಕೊಳ್ಳಿ. ಹಿಂದೆ ಡಿ.ವಿ.ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು ಶಾಕರಾಗಿದ್ದು, ನಿರಂತರ ಬೈಠಕ್ಗ್ಳನ್ನು ಮಾಡಿ 94 ಸಿ, 94ಸಿಸಿ ಅಕ್ರಮ-ಸಕ್ರಮ ಕಡತಗಳನ್ನು ವಿಲೇವಾರಿ ಮಾಡಿರುವುದು ದಾಖಲೆಗಳಲ್ಲಿ ಇದೆ. ಈ ರೀತಿಯ ಮಾಜಿ ಶಾಸಕರ ಮೇಲೆ ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುವ ಬದಲು ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ನಿತಿನ್, ದಯಾನಂದ ಸರೋಳಿ ಉಪಸ್ಥಿತರಿದ್ದರು.