ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಉಳಿಸಲು ಟಿಕೆಟ್ ದರ ಏರಿಕೆ ಅನಿವಾರ್ಯ
ಬೆಂಗಳೂರು : ಸಂಕ್ರಾಂತಿ ಹಬ್ಬದ ನಂತರ ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ದರ ಹೆಚ್ಚಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸಾರಿಗೆ ಮುಖಂಡರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಾಲ್ಕು ನಿಗಮಗಳಡಿಯಲ್ಲಿರುವ ಬಸ್ಗಳ ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಸಾರಿಗೆ ನೌಕರರು ಮನವಿ ಮಾಡಲು ಈಗಾಗಲೇ ಅಂಕಿಅಂಶಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳಾಗಿವೆ. ಕೆಎಸ್ಆರ್ಟಿಸಿ ಟಿಕೆಟ್ ಏರಿಕೆ ಮಾಡಿ ಐದು ವರ್ಷಗಳಾಗಿವೆ. ಹಾಗಾಗಿ ನಿಗಮಗಳನ್ನು ನಡೆಸಲು ಕಷ್ಟ ಆಗುತ್ತಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಮನವಿ ಮಾಡಲು ಸಾರಿಗೆ ಮುಖಂಡರು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಮುಖ್ಯಮಂತ್ರಿ ಜೊತೆಗೆ ನಡೆಸಿದ ಸಭೆಯಲ್ಲೂ ಸಾರಿಗೆ ಅಧಿಕಾರಿಗಳು ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್ಆರ್ಟಿಸಿ ಉಳಿಸಲು ಸಾಧ್ಯ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿಭಾಗಗಳ ದರ ಏರಿಕೆಯಾಗಿದೆ. ಇಂಧನ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಯಾಗಬೇಕೆಂದು ನಾಲ್ಕೂ ನಿಗಮಗಳು ಮನವಿ ಮಾಡಿವೆ.
ಟಿಕೆಟ್ ದರದಲ್ಲಿ ಶೇ.25ರಿಂದ 28ರಷ್ಟು ಏರಿಕೆಗೆ ನಾಲ್ಕು ನಿಗಮಗಳು ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿವೆ. ಸಂಕ್ರಾಂತಿ ಸಭೆಯ ನಂತರ ಶೇ.25 ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಮುಖಂಡ ಜಗದೀಶ್ ತಿಳಿಸಿದ್ದಾರೆ.
ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಗೆ 3650 ಕೋಟಿ ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ.15ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಶೇ.15 ದರ ಹೆಚ್ಚಳವಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.