ತಿಗಣೆ ಕಡಿದಿದ್ದಕ್ಕೆ 1.29 ಲ.ರೂ. ಪರಿಹಾರ !

ಖಾಸಗಿ ಬಸ್‌ ವಿರುದ್ಧ ಹೋರಾಡಿ ಗೆದ್ದ ಮಹಿಳೆ

ಮಂಗಳೂರು : ಖಾಸಗಿ ಬಸ್‌ನಲ್ಲಿ ತಿಗಣೆ ಕಡಿದು ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರಿಗೆ ಬರೋಬ್ಬರಿ 1.29 ಲ.ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಪಟ್ಟು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಸ್ ಮಾಲಕರಿಗೆ ಈ ಆದೇಶ ನೀಡಿದೆ.

ಘಟನೆ ಬಗ್ಗೆ ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ.ಹಂಡಿಗೋಲ್ ಮತ್ತು ಶಾರದಮ್ಮ ಎಚ್.ಜಿ. ಸಂತ್ರಸ್ತ ಮಹಿಳೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ನಟ ಶೋಭರಾಜ್ ಪಾವೂರು ಅವರ ಪತ್ನಿ ಹಾಗೂ ಕಲಾವಿದೆ ದೀಪಿಕಾ ಸುವರ್ಣ ಆಯೋಗಕ್ಕೆ ದೂರು ನೀಡಿದ್ದ ಸಂತ್ರಸ್ತ ಮಹಿಳೆ. 2022ರ ಆ.16ರಂದು ರಾತ್ರಿ ದೀಪಿಕಾ ಅವರಿಗೆ ಬಸ್‌ನಲ್ಲಿ ತಿಗಣೆ ಕಾಟ ನೀಡಿತ್ತು. ದೀಪಿಕಾ ಅವರಿಗೆ ಮೆಡಿಕಲ್ ಬಿಲ್ ಮೊತ್ತ 18,650 ರೂ. ಮತ್ತು ಶೇ.6ರ ವಾರ್ಷಿಕ ಬಡ್ಡಿ ಪಾವತಿಸಬೇಕು. ಬಸ್ಸಿನ ಟಿಕೆಟ್‌ನ ಮೊತ್ತ 840 ರೂ. ಜೊತೆಗೆ ದೂರು ನೀಡಿದ ದಿನಾಂಕದಿಂದ ಇಲ್ಲಿಯವರೆಗೆ ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕು. ಮಾನಸಿಕ ಕಿರಿಕಿರಿ, ಆರ್ಥಿಕ ನಷ್ಟ ಮತ್ತು ಇತರ ಕಾರಣಗಳಿಗಾಗಿ 1 ಲಕ್ಷ ರೂ. ಮತ್ತು ಶೇ.6ರ ಬಡ್ಡಿ ಪಾವತಿಸಬೇಕು. ದೂರು, ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.































 
 

45 ದಿನದಲ್ಲಿ ಈ ಮೊತ್ತವನ್ನು ಸಂತ್ರಸ್ತೆಗೆ ಪಾವತಿ ಮಾಡದಿದ್ದಲ್ಲಿ ಶೇ.8 ಹೆಚ್ಚುವರಿ ಬಡ್ಡಿಯೊಂದಿಗೆ ಪಾವತಿಸಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಆದೇಶಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top