ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಒಪ್ಪಿದ ಸರಕಾರ
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ. ಡಿ.31ರ ಮಧ್ಯರಾತ್ರಿಯಿಂದ ತೊಡಗಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಸಾರಿಗೆ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು. ಆದರೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಹೀಗಾಗಿ ಡಿ.31ರಂದು ಎಂದಿನಂತೆ ಸಾರಿಗೆ ಸಂಸ್ಥೆ ಬಸ್ಗಳು ರಸ್ತೆಗಿಳಿಯಲಿವೆ.
38 ತಿಂಗಳ ಎರಿಯರ್ಸ್ ಬಿಡುಗಡೆ ಮಾಡಬೇಕು ಮತ್ತು 2024ರ ಜನವರಿಯಿಂದ ವೇತನ ಹೆಚ್ಚಳ ಮಾಡಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ಅನಂತ್ ಸುಬ್ಬರಾವ್ ನೇತೃತ್ವದ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31ರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮದ ಬಸ್ಸುಗಳ ಸಂಚಾರ ನಿಲ್ಲಿಸಿ ಮುಷ್ಕರ ಹೂಡಲು ಸಿದ್ಧತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದ ನಿರ್ಧಾರ ಪ್ರಕಟಿಸಿದೆ.
ಡಿ.31ರಂದು ಜಂಟಿ ಕ್ರಿಯಾ ಸಮಿತಿಯವರು ವಿವಿಧ ಬೇಡಿಕೆಯನ್ನಿಟ್ಟು ಮುಷ್ಕರ ಮಾಡಲು ಮುಂದಾಗಿದ್ದರು. ನಮ್ಮ ಕಾರ್ಪೊರೇಷನ್ ಆರ್ಥಿಕ ಪರಿಸ್ಥಿತಿ ಅವರಿಗೂ ಗೊತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 5900 ಕೋಟಿ ರೂ. ಸಾಲ ಇಟ್ಟು ಹೋಗಿದ್ದಾರೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ನೌಕರರ ಬೇಡಿಕೆಯನ್ನು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. 11 ಸಾವಿರ ನೌಕರರಿಗೆ ಬಾಕಿಯಿದ್ದ 220 ಕೋಟಿ ಬಿಡುಗಡೆ ಮಾಡಿದ್ದಾರೆ. ಮತ್ತೆ ಎರಡು ಸಾವಿರ ಕೋಟಿ ರೂ. ಸಿಎಂ ಬಿಡುಗಡೆ ಮಾಡಿದ್ದಾರೆ. ಆ ಹಣ ಬಂದರೆ ಸಮಸ್ಯೆ ಪರಿಹಾರ ಆಗುತ್ತದೆ. ವೇತನ ಪರಿಷ್ಕರಣೆ ಬಗ್ಗೆ ಕೂಡ ಸಿಎಂಗೆ ಹೇಳಿದ್ದೇವೆ. ಫೆಬ್ರವರಿಯಲ್ಲಿ ಬಜೆಟ್ ಬರಲಿದೆ. ಆಗ ಅನುದಾನ ನೀಡಿ ಅಂತ ಬೇಡಿಕೆ ಇಟ್ಟಿದ್ದೇನೆ. ಸಂಕ್ರಾಂತಿ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
38 ತಿಂಗಳ ಎರಿಯರ್ಸ್, ಜ. 1ರಿಂದ ವೇತನ ಒಪ್ಪಂದ ಮಾಡಲಾಗಿದೆ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ನಮ್ಮ ಜೊತೆಗೆ ಮಾತಾಡುತ್ತಾರೆ. ಸಿಎಂ ಸಭೆ ಕರೆಯುತ್ತಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ನಮಗೆ ಪತ್ರ ಕಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮುಷ್ಕರ ವಾಪಸ್ಸು ಪಡೆದುಕೊಂಡಿದ್ದೇವೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ತಿಳಿಸಿದ್ದಾರೆ.