ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 184 ರನ್‌ಗಳ ಅಮೋಘ ಗೆಲುವು

ಸೋತು ಸುಣ್ಣವಾದ ಟೀಂ ಇಂಡಿಯಾ ಹೋರಾಟ 155 ರನ್‌ಗಳಿಗೆ ಮುಕ್ತಾಯ

ಮೆಲ್ಬೋರ್ನ್​: ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಸ್ಯಾಮ್​ ಕೊನ್​ಸ್ಟಾಸ್ (60), ಉಸ್ಮಾನ್ ಖ್ವಾಜಾ (57), ಮಾರ್ನಸ್ ಲಾಬುಶೇನ್ (72) ಅರ್ಧಶತಕ ಬಾರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 474 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಬುಮ್ರಾ 4 ವಿಕೆಟ್ ಪಡೆದರೆ, ಜಡೇಜಾ 3 ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕದ ಜೊತೆಯಾಟದೊಂದಿಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಅಂತಿಮವಾಗಿ 114 ರನ್​ ಬಾರಿಸಿ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ ಔಟಾಗುವುದರೊಂದಿಗೆ 369 ರನ್​ಗಳಿಗೆ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತು. ಆಸ್ಟ್ರೇಲಿಯಾ ಪರ ಕಮಿನ್ಸ್, ಬೋಲ್ಯಾಂಡ್ ಹಾಗೂ ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದರು.































 
 

ಪ್ರಥಮ ಇನಿಂಗ್ಸ್​ನ 105 ರನ್​​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಮಾರ್ನಸ್ ಲಾಬುಶೇನ್ (70) ಅರ್ಧಶತಕ ಬಾರಿಸಿದರು. ಮತ್ತೊಂದೆಡೆ ಕರಾರುವಾಕ್ ದಾಳಿ ಸಂಘಟಿಸಿದ ಜಸ್​ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರು. ಬುಮ್ರಾಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 234 ರನ್​ಗಳಿಗೆ ಆಲೌಟ್ ಆಯಿತು.

ಮೊದಲ ಇನಿಂಗ್ಸ್​ನ 105 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 84 ರನ್​ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌​​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಭಾರತ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 155 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ 184 ರನ್​ಗಳ ಅಮೋಘ ಗೆಲುವು ಸಾಧಿಸಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top