ಕಿಟಿಕಿ ಇದ್ದರೆ ಗೋಡೆ ಕಟ್ಟಿ ಮುಚ್ಚಬೇಕು
ಕಾಬೂಲ್ : ಅಫಘಾನಿಸ್ಥಾನದ ತಾಲಿಬಾನ್ ಆಡಳಿತ ಮನೆಗಳಿಗೆ ಕಿಟಿಕಿ ಅಳವಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಹೊಸದಾಗಿ ನಿರ್ಮಿಸುವ ಮನೆಗಳಿಗೆ ಕಿಟಿಕಿ ಅಳವಡಿಸಲೇ ಬಾರದು. ಈಗಾಗಲೇ ನಿರ್ಮಿಸಿರುವ ಮನೆಗಳ ಕಿಟಿಕಿಗಳನ್ನು ಮುಚ್ಚಬೇಕೆಂದು ತಾಲಿಬಾನ್ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಮನೆಗಳಿಗೆ ಕಿಟಿಕಿಗಳಿದ್ದರೆ ಪಡಸಾಲೆ, ಅಡುಗೆಕೋಣೆ, ಹಿತ್ತಿಲು ಇತ್ಯಾದಿ ಮನೆಯ ಒಳಗಿನ ಕೋಣೆಗಳು ಹೊರಗಿನವರಿಗೆ ಕಾಣುತ್ತವೆ. ಮನೆಯ ಸ್ತ್ರೀಯರು ಓಡಾಡುವ ಮನೆಯೊಳಗಿನ ಈ ಸ್ಥಳಗಳು ಪರರ ಕಣ್ಣಿಗೆ ಕಾಣದಿರಲು ಮನೆಗಳಿಗೆ ಕಿಟಿಕಿಗಳು ಇರಲೇಬಾರದು ಎಂದು ತಾಲಿಬಾನ್‌ನ ಪರಮೋಚ್ಚ ನ್ಯಾಯಲಯ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ. ಮಹಿಳೆಯರು ಹಿತ್ತಲಲ್ಲಿ ಏನಾದರೂ ಕೆಲಸ ಮಾಡುವುದು, ಬಾವಿಗಳಿಂದ ನೀರು ಸೇದುವುದು ಅಥವಾ ಅಡುಗೆಕೋಣೆಯಲ್ಲಿ ಕೆಲಸ ಮಾಡುವುದನ್ನು ನೆರೆಮನೆಯವರು ಕಿಟಿಕಿಯಲ್ಲಿ ಇಣುಕಿ ನೋಡುವ ಸಾಧ್ಯತೆ ಇರುತ್ತದೆ.
ಇದು ಅಸಭ್ಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತದೆ. ಹೀಗಾಗಿ ಮನೆಗಳಿಗೆ ಕಿಟಿಕಿಗಳೇ ಇರಬಾರದು ಎಂದು ತಾಲಿಬಾನ್ ವಕ್ತಾರ ಜಬಿವುಲ್ ಮುಜಾಹಿದ್ ಸರಕಾರದ ಆದೇಶವನ್ನು ವಿವರಿಸಿದ್ದಾರೆ.
ಮನೆಗಳಿಗೆ ಕಿಟಿಕಿಗಳು ಇರದಂತೆ ನೋಡಿಕೊಳ್ಳುವ ಹೊಣೆಯನ್ನು ನಗರಡಾಳಿತ ಹಾಗೂ ಇತರ ಸಂಬಂಧಿತ ಇಲಾಖೆಗಳಿಗೆ ನೀಡಲಾಗಿದೆ. ಒಂದು ವೇಳೆ ಕಿಟಿಕಿ ಇದ್ದರೂ ನೆರೆಮನೆಯವರು ಅದರ ಮೂಲಕ ಇಣುಕಿ ನೋಡದಂತೆ ಮಾಡಲು ಕಿಟಿಕಿಗಡ್ಡವಾಗಿ ಗೋಡೆ ನಿರ್ಮಿಸಬೇಕು. ಒಟ್ಟಾರೆಯಾಗಿ ಕಿಟಿಕಿಗಳಿಂದಾಗಿ ನೆರೆಮನೆಯವರು ಉಪಟಳ ನೀಡುವಂತಾಗಬಾರದು ಎನ್ನುವುದು ಸರಕಾರದ ಉದ್ದೇಶ ಎಂದು ವಕ್ತಾರ ಹೇಳಿದ್ದಾರೆ. ಸರಕಾರದ ಈ ಆದೇಶವನ್ನು ಉಲ್ಲಂಘಿಸಿದರೆ ಕಠಿನ ದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.