ಯಾರೂ ಬದುಕುಳಿದಿಲ್ಲ ಎಂದ ಅಧಿಕಾರಿಗಳು
ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ 179 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಮಾತ್ರ ಜೀವ ಸಹಿತ ರಕ್ಷಿಸಲು ಸಾಧ್ಯವಾಗಿದ್ದು, ಉಳಿದ ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
175 ಪ್ರಯಾಣಿಕರು ಮತ್ತು 6 ವೈಮಾನಿಕ ಸಿಬ್ಬಂದಿಯಿದ್ದ ವಿಮಾನ ಇಂದು ಬೆಳಗ್ಗೆ 9.05ಕ್ಕೆ (ಅಲ್ಲಿನ ಕಾಲಮಾನ) ಲ್ಯಾಂಡಿಂಗ್ ಗಿಯರ್ ವೈಫಲ್ಯದಿಂದಾಗಿ ರನ್‌ವೇಯಿಂದ ಪಲ್ಟಿಯಾಗಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾದ ಬಳಿಕ ಬೆಂಕಿ ಹತ್ತಿಕೊಂಡಿದ್ದು, ತುರ್ತು ಪರಿಹಾರ ಕಾರ್ಯಾಚರಣೆ ಮಾಡಿದ ಹೊರತಾಗಿಯೂ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಥಾಯ್ಲೆಂಡ್‌ನಿಂದ ಬಂದಿದ್ದ ಜೆಜು ಏರ್‌ವೇಸ್ ವಿಮಾನ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿರುವಾಗ ಈ ಭೀಕರ ಅವಘಡ ಸಂಭವಿಸಿದೆ. ಇದುವರೆಗೆ ಇಬ್ಬರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.
ಫ್ಲೈಟ್ ರಾಡಾರ್ ಪ್ರಕಾರ ಬೋಯಿಂಗ್ 737-8AS ಜೆಜು ಏರ್ ಪ್ಲೇನ್ ಸ್ಥಳೀಯ MBC ಬ್ರಾಡ್‌ಕಾಸ್ಟರ್ ಹಂಚಿಕೊಂಡ ವೀಡಿಯೊ ಮುವಾನ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುವುದನ್ನು ತೋರಿಸಿದೆ. ಇಡೀ ವಿಮಾನ ಬೆಂಕಿಯ ಉಂಡೆಯಂತೆ ಹೊತ್ತಿ ಉರಿದು ಎಂಜಿನ್‌ನಿಂದ ಹೊಗೆ ಬರುತ್ತಿರುವುದು ಈ ವೀಡಿಯೊದಲ್ಲಿ ಕಾಣಿಸುತ್ತಿದೆ. ವಿಮಾನ ಪೂರ್ತಿ ನಾಶವಾಗಿರುವುದರಿಂದ ಒಳಗಿರುವವರು ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
2005ರಲ್ಲಿ ಸ್ಥಾಪಿಸಲಾದ ದಕ್ಷಿಣ ಕೊರಿಯಾದ ಅತಿದೊಡ್ಡ ಹಾಗೂ ಅಗ್ಗದ ಪ್ರಯಾಣ ವೆಚ್ಚದ ವಿಮಾನ ಯಾನ ಕಂಪನಿಗಳಲ್ಲಿ ಒಂದಾದ ಜೆಜು ಏರ್‌ನ ಇತಿಹಾಸದಲ್ಲಿ ಇದು ಮೊದಲ ಭೀಕರ ಅಪಘಾತವಾಗಿದೆ.