ಪುತ್ತೂರು: ಪುತ್ತೂರು ಸ್ನೇಹಸಂಗಮ ಅಟೋರಿಕ್ಷಾ ಚಾಲಕ-ಮಾಲಕರ ಸಂಘದ 27ನೇ ವರ್ಷದ ವಾರ್ಷಿಕ ಮಹಾಸ ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಅಟೋರಿಕ್ಷಾ ಚಾಲಕರು ಪುತ್ತೂರಿನ ನರನಾಡಿಗಳು. ರಿಕ್ಷಾ ಚಾಲಕರು ಪ್ರತೀ ದಿನ ಕಷ್ಟಪಟ್ಟು ದುಡಿದು ಜೀವನ ನಿರ್ವಹಿಸಬೇಕಾಗುತ್ತದೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನನ್ನ ಅನುದಾನದಲ್ಲಿ ರಿಕ್ಷಾ ತಂಗುದಾಣ ನಿರ್ಮಿಸಿಕೊಟ್ಟಿದ್ದೇನೆ ಎಂದರು. ರಿಕ್ಷಾ ಚಾಲಕ ಮಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಬೇಕು ಎಂದು ಹೇಳಿದ ಅವರು, ಸಂಘದ ಮೂಲಕ ಸಾಧಕರನ್ನು ಗುರುತಿಸುವ ಕೆಲಸ ಮಾಡಿದ್ದೀರಿ. ಇದು ಉತ್ತಮವಾದ ಕೆಲಸ. ಪುತ್ತೂರಿನ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಮುಖ್ಯ ಅತಿಥಿ ಪುತ್ತೂರು ನಗರ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಮಾತನಾಡಿ, ರಿಕ್ಷಾ ಚಾಲಕರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಅವಿನಾಭಾವ ಸಂಬಂಧ ಇದೆ. ಪೊಲೀಸರಿಗೆ ತಮ್ಮ ಕರ್ತವ್ಯದಲ್ಲಿ ಹಲವು ವಿಧದಲ್ಲಿ ಸಹಕಾರಿಯಾಗುವವರು ರಿಕ್ಷಾ ಚಾಲಕರು. ಅನುಭವಿ ಚಾಲಕರಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ರಿಕ್ಷಾ ಚಾಲಕರು ಸಂಚಾರ ನಿಯಮಗಳನ್ನು ಅರಿತಿರಬೇಕು ಎಂದರು.
ಪುತ್ತೂರು ನಗರಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ರಿಕ್ಷಾ ಚಾಲಕರಲ್ಲಿ ಶೇ.೯೫ಷ್ಟು ಚಾಲಕರು ಸಂಚಾರಿ ನಿಯಮ ಪಾಲಿಸುತ್ತೀರಿ. ಶೇ.೫ರಷ್ಟು ಮಂದಿ ಸಂಚಾರ ನಿಯನು ಉಲ್ಲಂಘಿಸುವವರಿದ್ದಾರೆ. ನಾನು ಬದುಕಬೇಕು, ಇನ್ನೊಬ್ಬರನ್ನು ಬದುಕಿಸುವ ಕೆಲಸ ಮಾಡಬೇಕು. ನಿಮ್ಮಲ್ಲಿ ಯಾವುದೇ ಕೀಳು ಭಾವನೆ ಬೇಡ. ಆಟೋರಿಕ್ಷಾ ನಿಮ್ಮನ್ನು ರಕ್ಷಣೆ ಮಾಡುವ ದೇವರಂತೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಸುಭಾಸ್ ರೈ ಕಡಮಜಲು, ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಶುಭಹಾರೈಸಿದರು.
ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಭಾಷ್ ರೈ ಕಡಮಜಲು ಹಾಗೂ ಹರೀಶ್ ಭಟ್ ಕೇಪುಳು ಅವರನ್ನು ಸನ್ಮಾನಿಸಲಾಯಿತು.
೨೦೨೫ನೇ ಸಾಲಿನ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಪದಾಧಿಕಾರಿಗಳು ಸಂಘದ ಪುಸ್ತಕ ನೀಡಿ ಅಧಿಕಾರ ಹಸ್ತಾಂತರಿಸಿದರು. ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು.
ವಸ್ತ್ರ ಉದ್ಯಮಿ ಪ್ರಥಮ್ ಕಾಮತ್, ಆರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ, ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಸಿಟಿಗುಡ್ಡೆ, ಪಾಕತಜ್ಞ ಹರೀಶ್ ಭಟ್ ಕೇಪುಳು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮೃದ್ಧಿ ಜೆ. ಶೆಟ್ಟಿ ತಂಡ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರ ಚೋಕಿಂ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ವಾರ್ಷಿಕ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಹರೀಶ್ ಕುಮಾರ್ ಸ್ವಾಗತಿಸಿ, ಅಧ್ಯಕ್ಷ ಇಸ್ಮಾಯಿಲ್ ವಂದಿಸಿದರು.