ಅಗತ್ಯ ಇಲ್ಲದಿದ್ದರೂ ಇಂಟರ್‌ನೆಟ್ ರೀಚಾರ್ಜ್ ಮಾಡಿಕೊಳ್ಳುವ ಅನಿವಾರ್ಯತೆಯಿಂದ ಮುಕ್ತಿ
ಹೊಸದಿಲ್ಲಿ : ಭಾರತದ ಟೆಲಿಕಾಂ ನಿಯಂತ್ರಕ ಸಂಸ್ಥೆ (ಟ್ರಾಯ್) ಇಂಟರ್ನೆಟ್ ರಹಿತ ರಿಚಾರ್ಜ್ ಆಯ್ಕೆ ನೀಡಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಪ್ರಸ್ತುತ ರೀಚಾರ್ಜ್ ಮಾಡಬೇಕಾದರೆ ಇಂಟರ್‌ನೆಟ್ ಹಾಕಿಸಿಕೊಳ್ಳುವುದು ಅನಿವಾರ್ಯ ಎಂಬ ಪರಿಸ್ಥಿತಿಯಿದೆ. ಟೆಲಿಕಾಂ ಸೇವಾದಾರ ಕಂಪನಿಗಳು ಬರೀ ಕಾಲ್ ರೀಚಾರ್ಜ್ ಆಯ್ಕೆಯನ್ನು ಸ್ಥಗಿತಗೊಳಿಸಿ ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಬರೀ ಕಾಲ್ ಮತ್ತು ಎಸ್‌ಎಂಎಸ್ ರೀಚಾರ್ಜ್ ಆಯ್ಕೆ ಕೊಡಲು ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಡೇಟಾವನ್ನು ಖರೀದಿಸಲು ಯಾವುದೇ ಬಲವಂತವಿವಿಲ್ಲದೆ ಕರೆಗಳು ಮತ್ತು ಎಸ್‌ಎಂಎಸ್‌ಗಾಗಿ ಪ್ರತ್ಯೇಕವಾಗಿ ರೀಚಾರ್ಜ್ ಯೋಜನೆಗಳನ್ನು ಕಡ್ಡಾಯಗೊಳಿಸುವ ನಿಯಮಗಳಿಗೆ ಟ್ರಾಯ್ ತಿದ್ದುಪಡಿ ಮಾಡಿದೆ. ಇತ್ತೀಚೆಗೆ ಘೋಷಿಸಿರುವ ನೂತನ ನಿಯಮದಂತೆ, ಮೊಬೈಲ್ ಡೇಟಾವನ್ನು ಬಳಸದ ಗ್ರಾಹಕರಿಗೆ ಸೂಕ್ತವಾದ ಪರ್ಯಾಯ ಆಯ್ಕೆಗಳನ್ನು ಒದಗಿಸಬೇಕಾಗುತ್ತದೆ. ಅಲ್ಲದೇ ವಿಶೇಷ ರೀಚಾರ್ಜ್ ಕೂಪನ್‌ಗಳ ಮಾನ್ಯತೆಯನ್ನು ಪ್ರಸ್ತುತ 90 ದಿನಗಳಿಂದ ಗರಿಷ್ಠ 365 ದಿನಗಳವರೆಗೆ ವಿಸ್ತರಿಸಬೇಕು.
ಈ ಬದಲಾವಣೆಯಿಂದ ಬಹುಪಾಲು ಗ್ರಾಹಕರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಡ್ಯುಯಲ್ ಸಿಮ್ ಬಳಕೆದಾರರು, ಹಿರಿಯ ನಾಗರಿಕರು ಮತ್ತು ಗ್ರಾಮೀಣ ನಿವಾಸಿಗಳಿಗೆ ಸಹಕಾರಿಯಾಗಲಿದೆ. ಗ್ರಾಹಕರು ಅವರು ಬಳಸದ ಡೇಟಾಗೆ ಹೆಚ್ಚುವರಿ ಖರ್ಚು ಮಾಡುವ ಬದಲು ಅವರಿಗೆ ಅಗತ್ಯವಿರುವ ಸೇವೆಗಳಿಗೆ ಮಾತ್ರ ಪಾವತಿಸಲು ಅನುಮತಿಸಲಿದೆ.
ಪ್ರಸ್ತುತ ಕನಿಷ್ಠ ಎರಡು ಸಿಮ್ ಹೊಂದಿರುವುದು ಸಾಮಾನ್ಯವಾಗಿದ್ದು, ಇಂಥ ಗ್ರಾಹಕರು ಅಗತ್ಯ ಇಲ್ಲದಿದ್ದರೂ ಎರಡೂ ಸಿಮ್‌ಗಳಿಗೆ ಇಂಟರ್‌ನೆಟ್ ಕೂಡ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಅನೇಕ ಗ್ರಾಹಕರ ಬಳಸದ ಇಂಟರ್‌ನೆಟ್‌ನಿಂದಲೇ ಟೆಲಿಕಾಂ ಕಂಪನಿಗಳು ಪ್ರತಿತಿಂಗಳು ಕೋಟಿಗಟ್ಟಲೆ ರೂಪಾಯಿ ಲಾಭಮಾಡಿಕೊಳ್ಳುತ್ತಿವೆ.