ಹಿಂದು ಮಂತ್ರ, ಶ್ಲೋಕಗಳನ್ನು ತಿರುಚಿ ಹಾಡುವ ಇಸ್ರೇಲ್ ಗಾಯಕ ಸಜಂಕಾ
ಮಂಗಳೂರು: ಹೊಸ ವರ್ಷಾಚರಣೆಯಂಗವಾಗಿ ಮಂಗಳೂರಿನ ಬೋಳಾರದ ಬೀಚ್ನಲ್ಲಿ ಇಂದು ಸಂಜೆ ನಡೆಯಬೇಕಿದ್ದ ಇಸ್ರೇಲ್ ಮೂಲದ ಪ್ರಖ್ಯಾತ ಸಂಗೀತಗಾರ ಸಜಂಕಾ ಅವರ ಡಿಜೆ ಕಾರ್ಯಕ್ರಮ ಹಿಂದು ಸಂಘಟನೆಗಳ ಪ್ರಬಲ ವಿರೋಧದ ಕಾರಣ ಕೊನೆ ಕ್ಷಣದಲ್ಲಿ ರದ್ದಾಗಿದೆ. ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಹೊಸವರ್ಷಾಚರಣೆಗೆ ಮುಂಚಿತವಾಗಿ ಹಮ್ಮಿಕೊಂಡಿದ್ದ ಡಿಜೆ ಕಾರ್ಯಕ್ರಮಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇಸ್ರೇಲ್ ಮೂಲದ ಪ್ರಖ್ಯಾತ ಸಂಗೀತಗಾರ ಸಜಂಕಾ ಡಿಜೆ ಕುಣಿತದಲ್ಲಿ ಹಿಂದೂ ದೇವರ ಅವಹೇಳನ ಆರೋಪ ಕೇಳಿಬಂದಿತ್ತು. ಹೀಗಾಗಿ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕ್ರಮ ತಡೆಯುವ ಎಚ್ಚರಿಕೆ ನೀಡಿದ್ದವು. ಮಂಗಳೂರು ಪೊಲೀಸರಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸಂಘಟನೆಗಳು ಮನವಿ ಮಾಡಿದ್ದವು.
ಈ ಕಾರ್ಯಕ್ರಮ ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದ ಆರೋಪ ಕೇಳಿಬಂದಿದ್ದು, ಬಜರಂಗದಳ ಇಂಥ ಡಿಜೆ ಪಾರ್ಟಿಗಳಲ್ಲಿ ಭಾರಿ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿದೆ. ಸಜಂಕಾ ಸಂಗೀತ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಮಹಾಮಂತ್ರ, ರಾಮತಾರಕ ಮಂತ್ರ, ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ, ದುರ್ಗಾ ಸಪ್ತತಿ ಮಂತ್ರ ಸೇರಿದಂತೆ ಹಿಂದುಗಳ ಪವಿತ್ರ ಶ್ಲೋಕ, ಮಂತ್ರಗಳನ್ನು ಮತ್ತು ದೇವರ ಹಾಡುಗಳನ್ನು ವಿಕೃತವಾಗಿ ವಿಡಂಬನೆ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಲಾಗುತ್ತಿದೆ ಎಂಬ ಆರೋಪವಿದೆ.
ಆರಂಭದಲ್ಲೇ ವಿರೋಧ ಇದ್ದರೂ ಮಂಗಳೂರಿನ ಸಜಂಕಾ ಲೈವ್ ಕಾರ್ಯಕ್ರಮದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಕಾರ್ಯಕ್ರಮದ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದವು. ಈಗಾಗಲೇ ಮಂಗಳೂರಿಗೆ ಡಿಜೆ ಸಜಂಕಾ ಆಗಮಿಸಿದ್ದಾರೆ. ಆದರೆ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನಲೆ ಕಾರ್ಯಕ್ರಮ ರದ್ದು ಮಾಡಲಾಗಿದೆ. ಸಜಂಕಾ ಕಾರ್ಯಕ್ರಮ ನಡೆದರೆ ಇಂದು ಸಂಜೆ 6 ಗಂಟೆಗೆ ಪಾರ್ಟಿ ಆಯೋಜನೆಯ ಸ್ಥಳದಲ್ಲಿ ಪ್ರತಿಭಟನೆಗೆ ಬಜರಂಗದಳ ಮುಖಂಡ ಪುನೀತ್ ಅತ್ತಾವರ ಕರೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಸಜಂಕಾ ಎಂದು ಪೋಸ್ಟ್ ವೈರಲ್ ಆಗಿತ್ತು.