ವೇದಿಕೆಯಲ್ಲೇ ಶೂ ಕಳಚಿ ಪ್ರತಿಜ್ಞೆ ಜಾರಿ
ಚೆನ್ನೈ : ತಮಿಳುನಾಡಿನಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕಿತ್ತೆಸೆಯುವ ತನಕ ಚಪ್ಪಲಿ ಧರಿಸುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಯವರು ಮಾಡಿರುವ ಘೋರ ಪ್ರತಿಜ್ಞೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆಗೆ ನ್ಯಾಯ ಕೊಡಿಸಲು ಬಿಜೆಪಿ ರಾಜ್ಯವ್ಯಾಪಿಯಾಗಿ ಹೋರಾಟ ನಡೆಸುತ್ತಿದೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಮಿಳುನಾಡಿನ ಕೇಸರಿ ಪಡೆ ಆಂದೋಲನದ ಹಾದಿ ಹಿಡಿದಿದೆ. ಗುರುವಾರವೂ ಪ್ರತಿಭಟನೆ ನಡೆದಿದ್ದು, ಪೊಲೀಸರು ವಿವಿಧೆಡೆ ಕಮಲ ನಾಯಕರನ್ನು ಬಂಧಿಸಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿರುವುದು ಸಂಚಲನ ಮೂಡಿಸಿದೆ. ಅಣ್ಣಾಮಲೈ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಬೀಳುವವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ವೇದಿಕೆಯಲ್ಲೇ ಶೂ ತೆಗೆದಿದ್ದಾರೆ. ಸರ್ಕಾರದ ವರ್ತನೆಯನ್ನು ವಿರೋಧಿಸಿ 48 ಗಂಟೆಗಳ ಕಾಲ ಸಿಎಂ ಮನೆ ಮುಂದೆ ಧರಣಿ ನಡೆಸುವುದಾಗಿ ಘೋಷಿಸಿದ್ದಾರೆ.
ರಾಜಕೀಯ ನಾಯಕರು ವೇದಿಕೆಯಲ್ಲಿ ಪರಸ್ಪರ ದೂಷಿಸುವುದು, ಸವಾಲು ಹಾಕುವುದೆಲ್ಲ ಮಾಮೂಲು ದೃಶ್ಯಗಳು. ಆದರೆ ಪಕ್ಷದ ರಾಜ್ಯಾಧ್ಯಕ್ಷರೊಬ್ಬರು ಎದುರಾಳಿಗಳನ್ನು ಸೋಲಿಸುವ ತನಕ ಚಪ್ಪಲಿ ಧರಿಸುವುದಿಲ್ಲ ಎಂದು ಘೋರ ಪ್ರತಿಜ್ಞೆ ಮಾಡಿರುವುದು ಇದೇ ಮೊದಲು.
ಈ ಕಾರಣಕ್ಕೆ ಅಣ್ಣಾಮಲೈ ಪ್ರತಿಜ್ಞೆ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಅದರಲ್ಲೂ ತಮಿಳುನಾಡಿನಲ್ಲಿ ಬಿಜೆಪಿಯ ಸದ್ಯದ ಪರಿಸ್ಥಿತಿ ಅರಿವಿದ್ದೂ ಅಣ್ಣಾಮಲೈ ಇಂಥ ಪ್ರತಿಜ್ಞೆ ಕೈಗೊಂಡಿರುವುದು ದಿಟ್ಟತನ ಎಂದು ಹೇಳಲಾಗುತ್ತಿದೆ.
ಚುನಾವಣೆಯಲ್ಲಿ ಗೆಲ್ಲುವವರೆಗೆ ಚಪ್ಪಲಿ ಧರಿಸುವುದಿಲ್ಲ, ಡಿಎಂಕೆ ದುಷ್ಟತನವನ್ನು ಕೊನೆಗೊಳಿಸಲು ರಾಜ್ಯದ ಆರು ಮುರುಗನ ದೇವಸ್ಥಾನಗಳಿಗೆ ಭೇಟಿ ನೀಡಿ 48 ಗಂಟೆಗಳ ಕಾಲ ಉಪವಾಸ ಮಾಡುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ.
6 ಛಡಿ ಏಟು, 48 ದಿನ ಉಪವಾಸ
ಪ್ರಕರಣದ ಅಪರಾಧಿಗಳನ್ನು ಶಿಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೆ 48 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ಜತೆಗೆ ಹೆಣ್ಣು ಮಗಳಿಗಾದ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ 6 ಛಡಿ ಏಟು ಹೊಡೆದುಕೊಳ್ಳುತ್ತೇನೆ. ಮುಖ್ಯವಾಗಿ ಡಿಎಂಕೆ ಸರ್ಕಾರ ಪತನವಾಗುವವರೆಗೂ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಓಡಾಡುತ್ತೇನೆ ಎಂದು ಶಪಥ ಮಾಡಿದರು.
ಏನಿದು ಘಟನೆ?
ಕಳೆದ ಬುಧವಾರ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ ಮಧ್ಯರಾತ್ರಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ತನ್ನ ಸ್ನೇಹಿತನೊಂದಿಗೆ ವಿದ್ಯಾರ್ಥಿನಿ ಕ್ಯಾಂಪಸ್‌ಗೆ ಮರಳುತ್ತಿದ್ದಾಗ ಇಬ್ಬರು ಕಾಮುಕರ ಅಡ್ಡಗಟ್ಟಿದ್ದರು. ಬಳಿಕ ಸ್ನೇಹಿತನ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿನಿಯನ್ನು ಎಳೆದೊಯ್ದು ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಘಟನೆ ಸಂಬಂಧ ಕೊತ್ತೂರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಇನ್ನೂ ಗಟ್ಟಿನೆಲೆ ಸಿಕ್ಕಿಲ್ಲ. ಅಣ್ಣಾಮಲೈ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು. ವಿಧಾನಸಭೆಯಲ್ಲೂ ಬಿಜೆಪಿ ಸದಸ್ಯರಿಲ್ಲ. ಹೀಗಿದ್ದರೂ ಮುಂದಿನ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಲೇಬೇಕೆಂದು ಅಣ್ಣಾಮಲೈ ಹಠಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಪ್ರತಿಜ್ಞೆ ಈಡೇರುತ್ತದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಷ್ಟೆ.