ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿದ ಆರ್ಥಿಕ ತಜ್ಞ
ಹೊಸದಿಲ್ಲಿ : ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ (92) ಗುರುವಾರ ರಾತ್ರಿ ದಿಲ್ಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಮತ್ತು ಶುಕ್ರವಾರ (ಡಿ.27) ಸರ್ಕಾರಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಇಡೀ ದೇಶದಲ್ಲಿ 7 ದಿನಗಳ ಶೋಕಾಚರಣೆ ಇರಲಿದ್ದು, ಇದರ ಕುರಿತು ಇಂದು ಕೇಂದ್ರ ಸರಕಾರ ಪ್ರಕಟಿಸಲಿದೆ. 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಇದರಲ್ಲಿ ಶೋಕಾಚರಣೆಯ ನಿರ್ಧಾರ ಕೈಗೊಳ್ಳಲಾಗುವುದು.
ಸರಕಾರಿ ಕಾರ್ಯಕ್ರಮಗಳು ರದ್ದು
ಮನಮೋಹನ್ ಸಿಂಗ್ ನಿಧನರಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಶುಕ್ರವಾರ ಎಲ್ಲ ಸರಕಾರಿ ಕಾರ್ಯಕ್ರಮಗಳು ರದ್ದಾಗಲಿವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಕಾರ್ಯಕ್ರಮಗಳೆಲ್ಲ ರದ್ದಾಗಿವೆ.
ಕಾರ್ಯಕ್ರಮ ರದ್ದು ಮಾಡುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಇತರರು ಬೆಳಗಾವಿಯಿಂದ ದಿಲ್ಲಿಗೆ ತೆರಳಿದ್ದಾರೆ.
ಆರ್ಥಿಕ ಸುಧಾರಣೆಯ ಹರಿಕಾರ
ತೊಂಬತ್ತರ ದಶಕದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಭಾರತಕ್ಕೆ ‘ಆರ್ಥಿಕ ಸುಧಾರಣೆ’ಗಳೆಂಬ ಟಾನಿಕ್ ಮೂಲಕ ಚೇತರಿಕೆ ನೀಡಿದವರು ಡಾ. ಮನಮೋಹನ್ ಸಿಂಗ್. ಪಿ.ವಿ.ನರಸಿಂಹರಾವ್ ಪ್ರಧಾನಿ ಹಾಗೂ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭವದು. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೇ ಕೇಂದ್ರ ಹಣಕಾಸು ಸಚಿವರಾಗಿ ಸಿಂಗ್ ಅವರು ನರಸಿಂಹರಾವ್ ಅವರು ನೇಮಿಸಿಕೊಂಡರು. ವ್ಯಾಪಕ ವಿರೋಧದ ನಡುವೆಯೂ ಆಗ ದೇಶದಲ್ಲಿ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ಜಾರಿಗೆ ತಂದರು. ಈ ಕ್ರಮ ಭಾರತದ ಅರ್ಥವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿತು. ಆರ್ಥಿಕವಾಗಿ ಕುಂಟುತ್ತ ಸಾಗಿದ್ದ ಭಾರತ ವೇಗ ಪಡೆದುಕೊಂಡಿತು.
ದೇಶ-ವಿದೇಶಗಳಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿ ಅಪಾರ ಜ್ಞಾನ ಸಂಪತ್ತನ್ನು ಮನಮೋಹನ್ ಸಿಂಗ್ ಅವರು ಗಳಿಸಿದ್ದರು. ತಮ್ಮ ಆರ್ಥಿಕ ಜ್ಞಾನವನ್ನೆಲ್ಲ ಭಾರತದ ಬೆಳವಣಿಗೆಗೆ ಧಾರೆ ಎರೆದರು. ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ತಂದರು. ಹಾಗಾಗಿ, ಅವರನ್ನು ಭಾರತದ ಉದಾರೀಕರಣ ಆರ್ಥಿಕತೆಯ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಸ್ನೇಹಪರ ವ್ಯಕ್ತಿತ್ವ ಉಳ್ಳವರಾಗಿದ್ದರು. ಪ್ರತಿಸ್ಪರ್ಧಿಗಳಿಂದಲೂ ಮೆಚ್ಚುಗೆ ಪಡೆಯುತ್ತಿದ್ದ ವ್ಯಕ್ತಿ ಮನಮೋಹನ್ ಸಿಂಗ್.
ಆರ್ಥಿಕ ಸಲಹೆಗಾರನಿಂದ ಪ್ರಧಾನಿಯ ತನಕ
1971ರಲ್ಲಿ ಡಾ. ಸಿಂಗ್ ಅವರು ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಭಾರತ ಸರ್ಕಾರವನ್ನು ಸೇರಿದರು. 1972ರಲ್ಲಿ ಇವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಯಿತು. ಡಾ. ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತೀಯ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿ, ಪ್ರಧಾನಮಂತ್ರಿಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು.
ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಮೂಡಿತು. 1991ರಿಂದ 1996 ರವರೆಗೆ ಡಾ. ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ. ಜನಪ್ರಿಯ ದೃಷ್ಟಿಕೋನದಿಂದ ನೋಡುವುದಾದರೆ ಭಾರತದ ಅಂದಿನ ದಿನಗಳು ಡಾ. ಸಿಂಗ್ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ.
ವಿದೇಶಾಂಗ ನೀತಿಗಳು
ಅಭಿವೃದ್ಧಿ ಪಥದಲ್ಲಿ ಭಾರತವನ್ನು ಮುನ್ನಡೆಸಲು ಮನಮೋಹನ್ ಸಿಂಗ್ ತೆಗೆದುಕೊಂಡ ವಿದೇಶಾಂಗ ನೀತಿಯ ಪ್ರಯತ್ನಗಳು ಸಹ ಗಮನಾರ್ಹವಾದ ಹೆಜ್ಜೆ ಗುರುತು ಮೂಡಿಸಿವೆ. ಭಾರತದ ಜಾಗತಿಕ ಸ್ಥಾನಮಾನ ಮತ್ತು ವಿಶೇಷವಾಗಿ ನೆರೆಯ ರಾಷ್ಟ್ರಗಳೊಂದಿಗೆ ಕೆಲವು ಗಮನಾರ್ಹ ಒಪ್ಪಂದಗಳಿಗೆ ಇದು ಸಾಕ್ಷಿಯಾಯಿತು. ಭಾರತ-ಯುಎಸ್ ಪರಮಾಣು ಒಪ್ಪಂದ ದೇಶದಲ್ಲಿ ಭಾರಿ ರಾಜಕೀಯ ಗದ್ದಲದ ಕಿಡಿ ಹೊತ್ತಿಸಿತ್ತು. ಆಗಿನ ಸಂದರ್ಭದಲ್ಲಿ ಎಡರಂಗದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವುದು ಮತ್ತು ಬಹುಮತವನ್ನು ಸಾಬೀತುಪಡಿಸಲು ಡಾ. ಸಿಂಗ್ ಸರ್ಕಾರಕ್ಕೆ ಸವಾಲಾಗಿತ್ತು.
2008ರಲ್ಲಿ ಸಹಿ ಮಾಡಿದ ಹೆಗ್ಗುರುತಾಗಿರುವ ಭಾರತ-ಯುಎಸ್ ಪರಮಾಣು ಒಪ್ಪಂದ ಸಿಂಗ್ ಅವರ ಅತ್ಯಂತ ಪ್ರಸಿದ್ಧವಾದ ಸಾಧನೆಗಳಲ್ಲಿ ಒಂದಾಗಿದೆ. ಈ ಒಪ್ಪಂದ ಭಾರತದ ದಶಕಗಳ ಕಾಲದ ಪರಮಾಣು ಪ್ರತ್ಯೇಕತೆಯನ್ನು ಕೊನೆಗೊಳಿಸಿತು. 1974ರ ಪರಮಾಣು ಪರೀಕ್ಷೆಗಳ ನಂತರ ಮೊದಲ ಬಾರಿಗೆ ನಾಗರಿಕ ಪರಮಾಣು ತಂತ್ರಜ್ಞಾನ ಮತ್ತು ಇಂಧನವನ್ನು ಭಾರತಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಒಪ್ಪಂದವು ಕೇವಲ ಶಕ್ತಿಯ ಬಗ್ಗೆ ಅಲ್ಲ, ಇದು ಪ್ರಮುಖ ಶಕ್ತಿಗಳೊಂದಿಗೆ ಭಾರತದ ಸಂಬಂಧಗಳನ್ನು ಮರುರೂಪಿಸಿತು. ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಆಳವಾದ ರಕ್ಷಣಾ ಮತ್ತು ವ್ಯಾಪಾರ ಸಂಬಂಧಗಳಿಗೆ ಅಡಿಪಾಯ ಹಾಕಿತು. ಈ ಒಪ್ಪಂದ ಭಾರತವನ್ನು ಜವಾಬ್ದಾರಿಯುತ ಪರಮಾಣು ಶಕ್ತಿಯನ್ನಾಗಿ ಇರಿಸಿತು. ಅದರ ಜಾಗತಿಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿತು.