ಬಾಹುಬಲಿ ಫೋಟೊ ವಿಕೃತಗೊಳಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಮಹಿಳೆ
ನಾರಾವಿ : ಬಾಹುಬಲಿ ಮೂರ್ತಿಯ ಫೋಟೊ ವಿಕೃತಗೊಳಿಸಿ ಜೈನಧರ್ಮವನ್ನು ಅವಹೇಳನ ಮಾಡಿರುವ ನಾರಾವಿಯ ಮಹಿಳೆಯ ವಿರುದ್ಧ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಡಿ.20ರಂದು ತನ್ನ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಬಾಹುಬಲಿಯ ವಿಕೃತ ಚಿತ್ರಗಳನ್ನು ಹಂಚಿಕೊಂಡಿದ್ದಳು.
ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ಫೇಸ್‌ಬುಕ್ ಖಾತೆ ಹಾಗೂ ವಾಟ್ಸಪ್ ಮೂಲಕ ಹರಿಯಬಿಟ್ಟು ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಕುರಿತು ಅಕೆಯ ವಿರುದ್ಧ ದೂರು ನೀಡಲಾಗಿತ್ತು. ವೇಣೂರು ಪೊಲೀಸ್ ಠಾಣೆಯಲ್ಲಿ ಡಿ. 24ರಂದು ಪ್ರಕರಣ ದಾಖಲಾಗಿದೆ.
ಕಲ್ಮಂಜ ನಿವಾಸಿ ಪಣಿರಾಜ್ ಎಂಬುವರು ವಿಜಯಾ ನಾರಾವಿಯ ವಿರುದ್ಧ ದೂರು ನೀಡಿದ್ದಾರೆ. ಡಿ.20ರಂದು ವಿಜಯಾ ನಾರಾವಿ ಎಂಬಾಕೆ ಜೈನ ಧರ್ಮೀಯರ ಆರಾಧ್ಯ ದೇವರಾದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರಕ್ಕೆ ಮನುಷ್ಯನ ಮುಖವನ್ನು ಸೇರಿಸಿ ಚಡ್ಡಿ ಹಾಕಿ ತನ್ನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸಪ್ ಮೂಲಕ ಫೋಟೋವನ್ನು ಹರಿಯಬಿಟ್ಟಿದ್ದಾಳೆ. ಈಕೆ ಹಲವಾರು ಬಾರಿ ಇದೇ ರೀತಿ ಜೈನ ಧರ್ಮ ಹಾಗೂ ಜೈನ ಧರ್ಮಿಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಗೂ ಪೋಸ್ಟ್‌ಗಳನ್ನು ಹಾಕಿ ಅಹಿಂಸಾ ಪ್ರಿಯರಾದ ಜೈನ ಧರ್ಮೀಯರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾಳೆ. ಇದರಿಂದ ಜೈನ ಧರ್ಮೀಯರ ಮನಸ್ಸಿಗೆ ನೋವು ಉಂಟಾಗಿರುವುದು ಮಾತ್ರವಲ್ಲ, ಸನಾತನ ವಿಶ್ವ ಧರ್ಮವಾದ ಜೈನ ಧರ್ಮದ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.