ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ವತಿಯಿಂದ ಕಡಬ ಹೊಸಮಠದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿಯ ಉದ್ಘಾಟನೆ ಹಾಗೂ ಕಡಬ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿ.25 ರಂದು ಕಡಬ ಹೊಸಮಠದಲ್ಲಿ ನಡೆಯಿತು.
ಸಮುದಾಯ ಭವನ ಸಮಾಜದ ಸ್ವಾಭಿಮಾನ ಸಂಕೇತ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ
ಆಡಳಿತ ಕಚೇರಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದ ಶ್ರೀ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಸಮುದಾಯ ಭವನ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರ ಶ್ರಮ, ಶ್ರದ್ಧೆ, ಭಕ್ತಿ ಮೆಚ್ಚವಂತದ್ದು. ಮನೆ ಮನೆ ಭೇಟಿ ಸೇರಿದಂತೆ ಹಾಕಿಕೊಂಡಿರುವ ಯೋಜನೆಗಳು 10 ಸಮಾಜಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರ ಸೇವೆಯ ಮೂಲಕ ಸಮುದಾಯ ಭವನ ಬೃಹತ್ ಆಗಿ ಬೆಳೆಯಲಿ ಎಂದು ನುಡಿದರು. ಆರ್ಥಿಕ ನೆರವಿನ ಜೊತೆಗೆ ಮಾನವ ಶ್ರಮದಾನದ ಸೇವೆಯೂ ಶ್ರೇಷ್ಠ ವಾದದ್ದು ಒಂದು ವರ್ಷದಲ್ಲಿ ಇಲ್ಲಿ ಅದ್ಬುತವಾದ ಕೆಲಸ ನಡೆದಿದೆ. ಇದನ್ನು ಸಮಾಜ ಬಾಂಧವರು ಆನಂದ ಚಿತ್ತದಿಂದ ನೋಡಿ ತಮ್ಮ ಕೈಯಿಂದ ಆದಷ್ಟು ಸೇವೆ ಮಾಡಬೇಕು. ಸಮುದಾಯ ಭವನದ ಜೊತೆಗೆ ಹಾಕಿಕೊಂಡಿರುವ ಸಪ್ತ ಯೋಜನೆಗಳು ಪರಿಪೂರ್ಣ ವಾಗಲಿ ಎಂದು ಹೇಳಿ, ಜ 1 ಹಾಗೂ 2 ರಂದು ಮಂಗಳೂರು ಕಾವೂರು ಶಾಖಾ ಮಠದಲ್ಲಿ ನಡೆಯುವ ಶಾಖಾ ಮಠದ ರಜತ ಮಹೋತ್ಸವ, ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಾಗೂ 18 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುವಂತೆ ಹೇಳಿದರು.

ಒಗ್ಗಟಿದ್ದರೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ : ಯತೀಶ್ ಕುಮಾರ್
ಕಡಬ ತಾಲೂಕು ಒಕ್ಕಲಿಗ ಗೌಡ ಸ್ವಸಹಾಯ ಸಂಘಗಳ ಲಾಂಛನ ಅನಾವರಣಗೊಳಿಸಿ ಮಾತನಾಡಿದ ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್, ಎಲ್ಲರೂ ಜೊತೆ ಸೇರಿದಾಗ ಸಂಘಟನೆಯೂ ಬೆಳೆಯುವುದರೊಂದಿಗೆ ಸಂಘಟಕರಿಗೆ ಇನ್ನಷ್ಟೂ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ. ಕಡಬ ತಾಲೂಕು ಒಕ್ಕಲಿಗ ಗೌಡ ಸಮಾಜವು ಹಾಕಿಕೊಂಡಿರುವ ಸ್ವಸಹಾಯ ಸಂಘ ರಚನೆ, ಕ್ರೀಡಾಕೂಟ, ಆರೋಗ್ಯ ವಿಮೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ಇನ್ನಿತರ ಯೋಜನೆಗಳು ಯಶಸ್ವಿಯಾಗಗಲಿ ಎಂದು ಹೇಳಿದ ಅವರು, ಯುವಕರು ಸಣ್ಣ ಪುಟ್ಟ ಕೆಲಸಗಳಿಗೆ ನಗರಗಳಿಗೆ ಹೋಗುವ ಬದಲು ಪೊಲೀಸ್ ಇಲಾಖೆ ಅಥವಾ ಇನ್ನಿತರ ಸರಕಾರಿ ಕೆಲಸಗಳಿಗೆ ಸೇರಬೇಕೆಂದು ಹೇಳಿದರು.

ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ : ಪ್ರದೀಪ್ ಆರ್.ಗೌಡ
ಅತಿಥಿಯಾಗಿ ಬೆಂಗಳೂರಿನ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್ ಆರ್.ಗೌಡ ಅರುವ ಗುತ್ತು ಮಾತನಾಡಿ, ಒಕ್ಕಲಿಗ ಸಮಾಜವು ಮಾನವ ಕುಲಕ್ಕೆ ದಾರಿದೀಪವಾಗಿದೆ. ಒಕ್ಕಲಿಗ ಸಮುದಾಯವು ಪ್ರಪಂಚದ ಎಲ್ಲಾ ಕಡೆಯೂ ಇದೆ. ಒಕ್ಕಲಿಗ ಸಮಾಜಕ್ಕೆ ನಾಯಕತ್ವ ಗುಣವು ಸ್ವಾಭಾವಿಕವಾಗಿ ಬಂದಿದೆ. ಶಿಕ್ಷಣ, ಆರೋಗ್ಯಕ್ಕೆ ಸಮಾಜದಿಂದ ಹೆಚ್ಚಿನ ಒತ್ತು ನೀಡಬೇಕು, ಇಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಕನಸು ಇಟ್ಟುಕೊಳ್ಳಬೇಕು ಎಂದು ಹೇಳಿದ ಅವರು, ಸಂಘದ ಸ್ವಂತ ನಿವೇಶನದಲ್ಲಿ 1 ವರ್ಷದಲ್ಲಿ ಸಾಕಷ್ಟು ಕೆಲಸ ನಡೆದಿದೆ. ಸಂಘದ ವತಿಯಿಂದ 42 ಗ್ರಾಮಗಳ 10 ಸಾವಿರ ಮನೆ ಸಂಪರ್ಕ ಮಾಡುವ ಕೆಲಸ ಆಗಿದೆ. ಎಲ್ಲರೂ ಸಹಕಾರ ನೀಡುವ ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘದ ಮುನ್ನಡೆ : ಕೇಶವ ಅಮೈ
ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಮಾತನಾಡಿ, ಸಮಾಜ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಠೇವಣಿ, ಉಳಿತಾಯ ಖಾತೆ, ಚಾಲ್ತಿ ಖಾತೆ ತೆರೆದು ವ್ಯವಹರಿಸಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಘವನ್ನು ಮುನ್ನಡೆಸುತ್ತಿದ್ದೇವೆ ಎಂದರು.

ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು : ಸುರೇಶ್ ಬೈಲು
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಮಾತನಾಡಿ, ತಾಲೂಕು, ವಲಯ, ಗ್ರಾಮ ಸಮಿತಿ ಜೊತೆ ಮನೆ ಮನೆ ಭೇಟಿ ಅಭಿಯಾನದ ಮೂಲಕ ತಾಲೂಕಿನ 42 ಗ್ರಾಮಗಳ ಸಮಾಜ ಬಾಂಧವರ ಪ್ರತಿ ಮನೆಯನ್ನು ಭೇಟಿ ಮಾಡಿದ್ದೇವೆ. ಈ ಸಮುದಾಯ ಭವನ ಶ್ರೀಮಂತರ ಭವನ ಆಗದೆ ಸಮಾಜದ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಸಿಗಬೇಕು ಎಂಬ ನಿಟ್ಟಿನಲ್ಲಿ 1500 ಮಂದಿಯ ಸಭಾಭವನದ ಜೊತೆಗೆ 600 ಮಂದಿಯ ಸಣ್ಣ ಸಭಾಭವನವು ನಿರ್ಮಾಣವಾಗಲಿದೆ. ಕ್ರಷಿ ಸಲಕರಣೆ ಒದಗಿಸುವ ನಿಟ್ಟಿನಲ್ಲಿ 4000 ಚದರ ಅಡಿಯ ವಾಣಿಜ್ಯ ಸಂಕೀರ್ಣ, ಸಹಕಾರ ಸಂಘದ ಪ್ರಧಾನ ಕಚೇರಿ ಇಲ್ಲಿ ಆರಂಭವಾಗಲಿದೆ. ಒಟ್ಟಿನಲ್ಲಿ 7 ಯೋಜನೆ ಹಾಕಿಕೊಂಡಿದ್ದು ಇದರಲ್ಲಿ 5 ಯೋಜನೆಗಳು ಶೇ.90 ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು. ಯುವಕರು ಶಿಕ್ಷಣ ಪಡೆದರೆ ಸಾಲದು ಅವರಿಗೆ ಸಂಸ್ಕಾರ ಸಿಗಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ, ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ಇದೆ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಸಹಕರಿಸುವಂತೆ ಹೇಳಿದರು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸುಳ್ಯ ತಾಲೂಕು ಅಧ್ಯಕ್ಷ ಪಿ.ಎಸ್. ಗಂಗಾಧರ ಗೌಡ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪೂಯಿಲ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಯುವ ಸಂಘದ ಅಧ್ಯಕ್ಷ ಪೂಣೇ೯ಶ್ ಗೌಡ ಬಲ್ಯ, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಮೇಶ್ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಮಂಡೆಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೇಗಿಲ ಯೋಗಿ ಹಾಗೂ ನೇಗಿಲು ಸ್ವಸಹಾಯ ಸಂಘ ಉದ್ಘಾಟನೆಗೊಂಡಿತು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪಂದನಾ ಸಮುದಾಯ ಸಹಕಾರ ಸಂಘದ ನಿರ್ದೇಶಕ ಹಿರಿಯಣ್ಣ ಗೌಡ ಹೆಸರು ವಾಚಿಸಿದರು.
ಸುರೇಶ್ ಗೌಡ ಬೈಲು ಬಿಳಿನೆಲೆ ಹಾಗೂ ಸೌಮ್ಯ ದಂಪತಿ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಿದರು. ದಯಾನಂದ ಗೌಡ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ಪ್ರವೀಣ್ ಕುಂಟ್ಯಾನ ಅತಿಥಿಗಳಿಗೆ ವೀಳ್ಯ ನೀಡಿ ಸ್ವಾಗತಿಸಿದರು.
ಸಮುದಾಯ ಭವನದ ಮೇನೇಜರ್ ಅಶೋಕ್ ಶೇಡಿ ಸ್ವಾಗತಿಸಿ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಇಚ್ಲಂಪಾಡಿ ತಂಡದವರು ಧ್ಯೇಯ ಗೀತೆ ಹಾಡಿದರು.
ಬೆಳಿಗ್ಗೆ ನಾಗತಂಬಿಲ ಹಾಗೂ ನೂತನ ಆಡಳಿತ ಕಚೇರಿಯಲ್ಲಿ ಗಣಹೋಮ ನಡೆಯಿತು. ಬಳಿಕ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪೂಯಿಲ ಧ್ವಜಾರೋಹಣ ನೆರವೇರಿಸಿದರು. ಕುಂತೂರು ವಲಯ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್ ಸಣ್ಣಾರ ಕ್ರಿಡಾಕೂಟ ಉದ್ಘಾಟಿಸಿದರು. ಸಂಜೆ ತನಕ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಕೂಟ ನಡೆಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.