ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಉತ್ಪನ್ನ ಬಿಡುಗಡೆ ವಿಚಾರ
ಬೆಂಗಳೂರು: ಸಾಕಷ್ಟು ರಾಜಕೀಯ ಕೆಸರೆರಚಾಟದ ಬಳಿಕ ಕೊನೆಗೂ ನಂದಿನಿಯ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಬಂದಿದೆ. ನವೆಂಬರ್‌ನಲ್ಲಿಯೇ ಈ ಉತ್ಪನ್ನ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಬಳಿಕ ಸದ್ಯಕ್ಕೆ ಉತ್ಪನ್ನ ಬಿಡುಗಡೆ ಮಾಡುವುದಿಲ್ಲ ಎಂದು ಕೆಎಂಎಫ್ ಹೇಳಿತ್ತು. ಈ ವೇಳೆ ಕೇರಳದ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆ ಆಕ್ರಮಿಸಲು ತೊಡಗಿತ್ತು. ಈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಸರಕಾರ ನಂದಿನಿ ಬ್ರಾಂಡ್ ಉತ್ಪನ್ನಗಳಿಗೆ ತಡೆಯೊಡ್ಡಿದೆ ಎಂಬ ಆಕ್ರೋಶ ವ್ಯಕ್ತವಾಗಿ ಬಿಜೆಪಿ ಸರಕಾರದ ಮೇಲೆ ಸಾಕಷ್ಟು ಟೀಕೆಗಳನ್ನು ಮಾಡಿತ್ತು.
ಈ ನಡುವೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ಅವರನ್ನು ದಿಡೀರ್ ವರ್ಗಾವಣೆ ಮಾಡಲಾಗಿತ್ತು. ಕೇರಳ ಮೂಲದ ಖಾಸಗಿ ಕಂಪನಿ ಲಾಬಿಗೆ ಮಣಿದು ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಎಂಎಫ್ ಎಂಡಿಯನ್ನು ವರ್ಗಾವಣೆ ಮಾಡಿ, ಇಡ್ಲಿ ಮತ್ತು ದೋಸೆ ಹಿಟ್ಟು ಬಿಡುಗಡೆಗೆ ತಡೆ ಹಾಕಿದೆ ಎಂದು ಟೀಕಿಸಲಾಗಿತ್ತು.
ಇದೆಲ್ಲ ಆದ ಬಳಿಕ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಸಚಿವರಾದ ವೆಂಕಟೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸದ್ಯಕ್ಕೆ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಬೆಂಗಳೂರು ನಗರದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಗರದಲ್ಲಿ ದೋಸೆ, ಇಡ್ಲಿ ಹಿಟ್ಟು ಮಾರಾಟದ ಪ್ಯಾಕಿಂಗ್ ಮಾಡಲು ಪ್ರತ್ಯೇಕ ಘಟಕವನ್ನು ಕೆಎಂಎಫ್ ಆರಂಭಿಸಿದ್ದು, ಇಲ್ಲಿಂದಲೇ ನಗರದ ಉಳಿದ ಕಡೆ ಸರಬರಾಜು ಆಗುತ್ತದೆ.
ಎರಡು ಮಾದರಿ ಪ್ಯಾಕ್‌ಗಳಲ್ಲಿ ಈ ಉತ್ಪನ್ನ ಮಾರುಕಟ್ಟೆಗೆ ಬಂದಿದೆ. 450 ಗ್ರಾಂ ಪ್ಯಾಕ್‌ಗೆ 40 ರೂ. ಮತ್ತು 900 ಗ್ರಾಮ ಪ್ಯಾಕ್‌ಗೆ 80 ರೂ. ದರ ನಿಗದಿ ಮಾಡಲಾಗಿದೆ. ಈ ಉತ್ಪನ್ನಕ್ಕೆ ಜನರ ಪ್ರತಿಕ್ರಿಯೆಯ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ನಗರ, ಪಟ್ಟಣದಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್ ಹೇಳಿದೆ.