ತೆಕ್ಕಟ್ಟೆಯಿಂದ ಬೀಜಾಡಿಯವರೆಗೆ ಪಾರ್ಥಿವ ಶರೀರದ ಮೆರವಣಿಗೆ
ಉಡುಪಿ: ಜಮ್ಮು-ಕಾಶ್ಮೀರದ ಪೂಂಛ್‌ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕುಂದಾಪುರ ಸಮೀಪ ಬೀಜಾಡಿಯ ಅನೂಪ್ ಪೂಜಾರಿ ಸಹಿತ ಕರ್ನಾಟಕದ ಮೂವರು ಯೋಧರ ಪಾರ್ಥಿವ ಶರೀರ ಇಂದು ಅವರವರ ಹುಟ್ಟೂರಿಗೆ ತಲುಪಲಿವೆ.
ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಉಡುಪಿಯಿಂದ ಬೆಳಗ್ಗೆ ಬೀಜಾಡಿಗೆ ರವಾನೆಯಾಗಲಿದೆ. ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಯಲಿದೆ. ಸುಮಾರು 5,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.
ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೀಜಾಡಿಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆಪ್ತರು, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುವುದು.
ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅಂತ್ಯಸಂಸ್ಕಾರ ನಡೆಯಲಿದೆ. ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮುದ್ರ ತೀರದಲ್ಲಿ ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು. ಅಂತಿಮ ವಿಧಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಲಿದ್ದಾರೆ. ಗುರುವಾರ ಮಧ್ಯಾಹ್ನ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ತಾಯಿಯ ಕಣ್ಣೀರು
ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಅವಘಡದಲ್ಲಿ ಐವರು ಯೋಧರು ದುರ್ಮರಣವನ್ನಪ್ಪಿದ್ದು, ಅವರಲ್ಲಿ ಮೂವರು ಕನ್ನಡಿಗರು. ಮಗನ ಸಾವಿನ ಸುದ್ದಿ ತಿಳಿದು ಅನೂಪ್ ಪೂಜಾರಿಯವರ ತಾಯಿಚಂದು ಪೂಜಾರಿ ಆಘಾತಗೊಂಡಿದ್ದಾರೆ. ದೇವರು ನನಗೆ ಮೋಸ ಮಾಡಿದ. ಇದ್ದ ಒಬ್ಬ ಗಂಡು ಮಗನನ್ನು ನಾನು ಕಳೆದುಕೊಂಡೆ. ಡಿಸೆಂಬರ್ 20ಕ್ಕೆ ನನ್ನ ಮಗ ಮನೆಯಿಂದ ಹೊರಟಿದ್ದ. ದೇವರು ನನ್ನ ಹೊಟ್ಟೆಗೆ ಕಲ್ಲು, ಮಣ್ಣು ತುಂಬಿಸಿ ಬಿಟ್ಟ. ನನ್ನ ಮಗುವನ್ನು ದೇವರು ಕಸಿದುಕೊಂಡ ನನಗೆ ಮಗುವನ್ನು ಯಾರು ತಂದುಕೊಡುತ್ತಾರೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಪೆರ್ಡೂರಿನ ಮಂಜುಶ್ರೀಯನ್ನು ವಿವಾಹಿತರಾಗಿದ್ದ ಅನೂಪ್ ಪೂಜಾರಿಯವರಿಗೆ ಒಂದೂವರೆ ವರ್ಷದ ಹೆಣ್ಣುಮಗುವಿದೆ.