18 ತಿಂಗಳಲ್ಲಿ 11 ಪುರುಷರನ್ನು ಕೊಂದಿದ್ದ ಸರಣಿ ಹಂತಕ
ಹೊಸದಿಲ್ಲಿ : 18 ತಿಂಗಳಲ್ಲಿ 11 ಪುರುಷರನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್ನನ್ನು ಕೊನೆಗೂ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಹಂತಕ ಸಲಿಂಗಕಾಮಿಯಾಗಿದ್ದು, ಪುರುಷರೇ ಅವನ ಟಾರ್ಗೆಟ್ ಆಗಿದ್ದರು. ಕಳೆದ 18 ತಿಂಗಳಲ್ಲಿ ಬೆನ್ನುಬೆನ್ನಿಗೆ ನಡೆದ 11 ಪುರುಷರ ಹತ್ಯೆ ಪಂಜಾಬ್ ಪೊಲೀಸರಿಗೆ ಸವಾಲಾಗಿತ್ತು. ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. 11 ಕೊಲೆ ಲೆಕ್ಕಕ್ಕೆ ಸಿಕ್ಕಿದ್ದರೂ ಕೆಲವು ಕೊಲೆಗಳ ಬಗ್ಗೆ ಅವನಿಗೆ ನೆನಪು ಇಲ್ಲವಂತೆ. ಈತ ಭಾರತ ಕಂಡ ಖತರ್‌ನಾಕ್ ಸೀರಿಯಲ್ ಕಿಲ್ಲರ್ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಾಗಿ ಆತ ರಾತ್ರಿ ಹೊತ್ತು ರಸ್ತೆಯಲ್ಲಿ ಸಿಗುವ ಒಂಟಿ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದ. ಅವರೊಂದಿಗೆ ದೈಹಿಕ ಸಂಪರ್ಕ ಸಾಧಿಸಿ ದರೋಡೆ ಮಾಡಿ ಕೊಂದು ಹಾಕುತ್ತಿದ್ದ. ಆರೋಪಿಯನ್ನು ರಾಮ್ ಸರೂಪ್ ಅಲಿಯಾಸ್ ಸೋಧಿ ಎಂದು ಗುರುತಿಸಲಾಗಿದ್ದು, ಕಿರಾತ್‌ಪುರ ಸಾಹಿಬ್ ಬಳಿಯ ಮೌಡಾ ಟೋಲ್ ಪ್ಲಾಜಾ ಬಳಿ ಅವನನ್ನು ಸೆರೆಹಿಡಿಯಲಾಗಿದೆ.
ಸರಣಿ ಕೊಲೆ ಘಟನೆಗಳು ಪೊಲೀಸರ ನಿದ್ದೆಗೆಡಿಸಿದ್ದವು. ಹರ್‌ಪ್ರೀತ್ ಅಲಿಯಾಸ್ ಸನ್ನಿ ಎಂಬಾತನ ಹತ್ಯೆ ಪ್ರಕರಣದ ಬೆನ್ನುಹತ್ತಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ದೈಹಿಕ ಸಂಬಂಧದ ಬಳಿಕ ಹಣ ನೀಡಲು ನಿರಾಕರಿಸಿದ್ದಕ್ಕೆ ಜಗಳವಾಗಿ ಸನ್ನಿಯನ್ನು ಕೊಂದು ಹಾಕಿದ್ದಾನೆ.
ಆರೋಪಿ ಮಾದಕವಸ್ತು ವ್ಯಸನಿಯಾಗಿದ್ದು, ಅದರ ಮತ್ತಿನಲ್ಲಿ ಕೊಲೆಗಳನ್ನು ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಮನಯವರು ಅವನನ್ನು ಮನೆಯಿಂದ ಹೊರಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಕೊಲೆ ಮಾಡಿದ ನಂತರ ಪಶ್ಚಾತ್ತಾಪಪಟ್ಟು ಮೃತದೇಹದ ಪಾದ ಮುಟ್ಟಿ ಕ್ಷಮೆ ಯಾಚಿಸುತ್ತಿದ್ದೆ. ಡ್ರಗ್ ಅಮಲಿನಲ್ಲಿ ಎಲ್ಲ ಕೊಲೆಗಳನ್ನು ಎಸಗಿರುವುದಾಗಿ ಆರೋಪಿ ಹೇಳಿದ್ದಾನೆ. ಕಾರಿನಲ್ಲಿ ಲಿಫ್ಟ್ ಕೇಳಿ ಬಳಿಕ ಅವರನ್ನು ದರೋಡೆ ಮಾಡುತ್ತಿದ್ದ. ಪ್ರತಿರೋಧ ತೋರಿಸಿದವರನ್ನು ಇಟ್ಟಿಗೆಯಂತಹ ಗಟ್ಟಿ ವಸ್ತುವನ್ನು ಬಳಸುತ್ತಿದ್ದ ಇಲ್ಲವಾದರೆ ಕತ್ತು ಹಿಸುಕಿ ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.