500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ

ಮಂಗಳೂರಿನ ಬ್ಯಾಂಕಿಗೆ ಪಂಗನಾಮ ಹಾಕಿದ ಖದೀಮ

ಮಂಗಳೂರು : ಒಂದೆರಡಲ್ಲ ಬರೋಬ್ಬರಿ 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚನೆ ಎಸಗಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು ಮೋಸ ಮಾಡಿದ್ದಾನೆ. ಇದು ಬ್ಯಾಂಕಿನವರ ಸಹಕಾರದಿಂದಲೇ ನಡೆದಿರುವ ವಂಚನೆ ಎನ್ನಲಾಗಿದ್ದು, ಅಬೂಬಕ್ಕರ್​ ಸಿದ್ದಿಕ್​, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಸೇವಾ ಸಹಕಾರಿ ಸಂಘ ದ.ಕ. ಜಿಲ್ಲೆಯಲ್ಲಿ 16 ಶಾಖೆ ಹೊಂದಿದೆ. ಮಂಗಳೂರಿನ ಪಡೀಲ್​ನ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿನ್ನ ಪರೀಕ್ಷೆ ನಡೆಸುವ ಸರಾಫ, ಬ್ಯಾಂಕ್​ನ ಅಧ್ಯಕ್ಷ, ನಿರ್ದೇಶಕರು ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್​ನ ಮಾಜಿ ನಿರ್ದೇಶಕ ಡಿ.ಲೋಕನಾಥ್ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್​ನ ಸರಾಫ ವಿವೇಕ್ ಆಚಾರ್ಯನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದಿಕ್​ಗಾಗಿ ಹುಡುಕಾಟ ಮುಂದುವರಿದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.































 
 

ಪ್ರಕರಣ ಸಂಬಂಧ ದೂರುದಾರ ಲೋಕನಾಥ್ ಡಿ. ಮಾತನಾಡಿ, ಅಬೂಬಕ್ಕರ್ ಸಿದ್ದಿಕ್ ಮೊದಲಿನಿಂದಲೂ ಬ್ಯಾಂಕ್​ನ ಗ್ರಾಹಕರಾಗಿದ್ದ. 2023ರ ನವೆಂಬರ್ ತಿಂಗಳಿನಲ್ಲಿ ಒಂದೇ ರೀತಿಯ 500 ನಕಲಿ ಚಿನ್ನದ ಬಳೆ ಅಡವಿಟ್ಟು, ಸಾಲ ಪಡೆದಿದ್ದಾನೆ ಸಾಲವನ್ನು ಮೂರು ತಿಂಗಳಲ್ಲಿ ತೀರಿಸಬೇಕಿತ್ತು. ಆದರೆ ಸಾಲ ತೀರಿಸದೆ ಇದ್ದಾಗ ಬ್ಯಾಂಕ್​ನ ಪ್ರಭಾರ ಮ್ಯಾನೇಜರ್​ ಅವರು ಅನುಮಾನಗೊಂಡು ಬೇರೆಯವರಿಂದ ಮರುತಪಾಸಣೆ ನಡೆಸಿದಾಗ ಚಿನ್ನ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಜನರಲ್ ಮ್ಯಾನೇಜರ್ ಸರಾಫ್​ ಅವರಿಗೆ ಪತ್ರ ಬರೆದಿದ್ದಾರೆ. ಸರಿಯಾಗಿ ಚಿನ್ನವನ್ನು ಪರೀಕ್ಷೆ ಮಾಡದ ಕಾರಣ ಬ್ಯಾಂಕ್​ಗೆ 2 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ. ನೀನು‌ ಅದನ್ನು ತಕ್ಷಣ ಪಾವತಿಸುವಂತೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top