ನಾಳೆಯಿಂದ ಬೆಳಗಾವಿಯಲ್ಲಿ ಕಾಂಗ್ರೆಸ್‌ ಮಹಾಅಧಿವೇಶನದ ಶತಮಾನೋತ್ಸವ

ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ; ಕಾಂಗ್ರೆಸ್‌ ಶಕ್ತಿ ಪ್ರದರ್ಶನ

ಬೆಳಗಾವಿ : ಬೆಳಗಾವಿಯ ಕಾಂಗ್ರೆಸ್‌ ಮಹಾಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ನೆನಪಿಗಾಗಿ ನೂರು ವರ್ಷ ಹಿಂದೆ ಅಧಿವೇಶನ ನಡೆದ ಬೆಳಗಾವಿಯಲ್ಲೇ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಅಧಿವೇಶನ ನಡೆದಿತ್ತು. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸಲು ಸಜ್ಜಾಗಿದೆ.

ಗುರುವಾರ ಮತ್ತು ಶುಕ್ರವಾರ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂ.ಬಿ ಪಾಟೀಲ್ ಸೇರಿ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿ ಸಿದ್ಧತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.































 
 

ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, 140 ಸಂಸದರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಪ್ರಮುಖ ನಾಯಕರಿಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಖರ್ಗೆ ಅವರೇ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಗುರುವಾರ ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಿದ್ದು ಫೋಟೋ ಸೆಷನ್ ಕೂಡ ನಡೆಯಲಿದೆ. ಡಿ.27ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ

ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಬಿಜೆಪಿ ಕಿಡಿಕಾರಿದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ನಕಲಿ ಗಾಂಧಿಗಳಿಂದ ಸಮಾವೇಶ ಎಂದು ಲೇವಡಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಸಂಸದರನ್ನು ಆಹ್ವಾನಿಸದೆ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಕಿಡಿಕಾರಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top