ಕೊಪ್ಪಳ : ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನೋರ್ವ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಡುಗೆ ಸಹಾಯಕನಾಗಿದ್ದ ವ್ಯಕ್ತಿಯೋರ್ವ ಮಕ್ಕಳಿಗೆ ಕಿರುಕುಳ ನೀಡುವುದಲ್ಲದೆ ‘ಬ್ಯಾಡ್ ಟಚ್’ ಮಾಡುತ್ತಾನೆ ಎಂದು ವಿದ್ಯಾರ್ಥಿಗಳು ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ದೂರಿದ್ದಾರೆ. ಸಲಹಾ ಪೆಟ್ಟಿಗೆಯನ್ನು ಪರಿಶೀಲಿಸುವ ವೇಳೆ ಶಾಲಾ ಮುಖ್ಯೋಪಾಧ್ಯಾಯರಿಗೆ ವಿಷಯ ಬೆಳಕಿಗೆ ಬಂದಿದೆ. ಈ ಆರೋಪದ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಡುಗೆ ಸಹಾಯಕನ ವಿರುದ್ಧ ಡಿ.23ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
‘ಮಕ್ಕಳ ಸುರಕ್ಷತಾ ನೀತಿಯನ್ವಯ ಸಿಬ್ಬಂದಿಯಿಂದ ಮಕ್ಕಳ ಸುರಕ್ಷತೆಯ ಬಗ್ಗೆ ‘ಬದ್ಧತಾ ಪತ್ರ”, ಸಿಬ್ಬಂದಿಗಳ ಪೊಲೀಸ್ ಪರಿಶೀಲನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತಾ ನೀತಿ’, ‘ಸಲಹಾ ಪೆಟ್ಟಿಗೆ’ ಅಳವಡಿಕೆ, ಸಂಸ್ಥೆಯಲ್ಲಿ ‘ಸಿಸಿಟಿವಿ’ ಕ್ಯಾಮರಾ ಅಳವಡಿಕೆ, ಸಂಸ್ಥೆಯಲ್ಲಿ ‘ಮಕ್ಕಳ ಸಹಾಯವಾಣಿ ಸಂಖ್ಯೆಯಾದ -1098’ ನಂಬರನ್ನು ಶಾಶ್ವತ ಗೋಡೆ ಬರಹ ಬರೆಸುವುದು, ‘ಪೋಷಕರ ಸಭೆ’ ನಡೆಸುವುದು ‘ಪ್ರತೀ ಸಂಸ್ಥೆಯ ಸುರಕ್ಷತಾ ನೀತಿ’ ಅಳವಡಿಸಿಕೊಳ್ಳುವುದು ಹಾಗೂ ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಶೈಕ್ಷಣಿಕ ಸಂಸ್ಥೆಗಳು ‘ಮಕ್ಕಳ ಸುರಕ್ಷತಾ ನೀತಿ-2016 ಪರಿಷ್ಕಕೃತ-2023’ನ್ನು ಅಳವಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ ‘ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ನೀಡಲು ಜಿಲ್ಲಾಧಿಕಾರಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ