ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಕಾಪು ಮೂಲದ ಹುಡುಗ ತನುಷ್ ಕೋಟ್ಯಾನ್

ರವಿಚಂದ್ರನ್‌ ಅಶ್ವಿನ್‌ ನಿವೃತ್ತಿಯಿಂದಾಗಿ ಸಿಕ್ಕಿದ ಅವಕಾಶ

ಮುಂಬಯಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತನುಷ್ ಕೋಟ್ಯಾನ್ ಎಂಬ ಯುವ ಆಟಗಾರ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ತನುಷ್‌ ಕೋಟ್ಯಾನ್‌ ಹೆತ್ತವರು ಉಡುಪಿಯ ಕಾಪು ಮೂಲದವರು. ತನುಷ್‌ ಕೋಟ್ಯಾನ್‌ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ.

ತನುಷ್ ಕೋಟ್ಯಾನ್ ವಯಸ್ಸು ಕೇವಲ 26. ಬಲಗೈ ಸ್ಪಿನ್ನರ್, ಬಲಗೈ ಬ್ಯಾಟ್ಸ್‌ಮನ್‌. ಕಳೆದ ಕೆಲ ವರ್ಷಗಳಿಂದ ಮುಂಬಯಿ ತಂಡದ ಖಾಯಂ ಸದಸ್ಯ. ಇದೀಗ ರವಿಚಂದ್ರನ್ ಅಶ್ವಿನ್ ಅವರಿಂದ ತೆರವಾಗಿರುವ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.































 
 

ತನುಷ್ ಕೋಟ್ಯಾನ್ ಕುಟುಂಬಸ್ಥರು ಕಾಪು ಮೂಲದವರಾಗಿದ್ದರೂ, ಅವರು ಬೆಳೆದಿದ್ದು ಮುಂಬಯಿಯಲ್ಲಿ. ಹೀಗಾಗಿ ಮುಂಬಯಿಯಲ್ಲೇ ಕ್ರಿಕೆಟ್ ಕೆರಿಯರ್ ಕೂಡ ಶುರುವಾಯಿತು. ಬಾಲ್ಯದಿಂದಲೇ ಆಲ್ ರೌಂಡರ್ ಆಟದೊಂದಿಗೆ ಗಮನ ಸೆಳೆದ ತನುಷ್​ಗೆ ಮುಂಬಯಿ ಕಿರಿಯರ ತಂಡದಲ್ಲಿ ಸ್ಥಾನ ಸಿಗಲು ಹೆಚ್ಚೇನು ಸಮಯವಾಗಲಿಲ್ಲ. 2018ರಲ್ಲಿ, ಅಂದರೆ 20ನೇ ವಯಸ್ಸಿನಲ್ಲಿ ಮುಂಬಯಿ ಪರ ಕಣಕ್ಕಿಳಿದ ತನುಷ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ಆಲ್ ರೌಂಡರ್ ಆಟದೊಂದಿಗೆ ತಂಡದಲ್ಲಿ ಖಾಯಂ ಸ್ಥಾನ ಪಡದುಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟೂರ್ನಿಯಲ್ಲೂ ಮುಂಬಯಿ ತಂಡದ ಭಾಗವಾಗಿದ್ದಾರೆ.
ತನುಷ್ ಕೋಟ್ಯಾನ್ ಮುಂಬಯಿ ಪರ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಅವರು 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಹಾಗೆಯೇ 25.70 ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಅವರ ಬ್ಯಾಟ್​ನಿಂದ 2 ಭರ್ಜರಿ ಶತಕ ಮತ್ತು 13 ಅರ್ಧ ಶತಕಗಳು ಮೂಡಿಬಂದಿವೆ.
2023-24ರಲ್ಲಿ ಮುಂಬಯಿ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್ ಪ್ರಮುಖ ಪಾತ್ರವಹಿಸಿದ್ದರು. ಈ ಟೂರ್ನಿಯಲ್ಲಿ 41.83 ಸರಾಸರಿಯಲ್ಲಿ 502 ರನ್ ಗಳಿಸಿದ್ದಲ್ಲದೆ 29 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇರಾನಿ ಕಪ್​​ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 27 ವರ್ಷಗಳ ನಂತರ ಮುಂಬಯಿ ತಂಡ ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ತನುಷ್ 3 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು.
ಈ ಎಲ್ಲಾ ಭರ್ಜರಿ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರ ಸ್ಥಾನದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತನುಷ್ ಕೋಟ್ಯಾನ್ ಆಡಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top