ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಡಿ.28 ಹಾಗೂ 29 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಈಗಾಗಲೇ 53 ಚದರ ಅಡಿಯ ಪೆಂಡಾಲ್ ಹಾಗೂ ಅನ್ನ ಸಂತರ್ಪಣೆಗಾಗಿ 20 ಸಾವಿರ ಚದರ ಅಡಿಯ ಬೃಹತ್ ಪೆಂಡಾಲ್ ಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಅಲಂಕಾರ, ಬಂಟಿಂಗ್ಸ್ ಗಳ ಅಳವಡಿಕೆ, ಪ್ರತೀ ಬೂತ್ ಮಟ್ಟದಲ್ಲಿ ಫ್ಲೆಕ್ಸ್ ಅಳವಡಿಗೆ ಕಾರ್ಯ ಶೇ.80 ರಷ್ಟು ಮುಗಿದಿದೆ ಎಂದು ತಿಳಿಸಿದರು.
ಡಿ.26 ರಂದು ಬೊಳುವಾರಿನಿಂದ ದರ್ಬೆ ತನಕ ಆಮಂತ್ರಣ ಪತ್ರಿಕೆ ವಿತರಣೆ ಮಾಡಲಾಗುವುದು. ಈಗಾಗಲೇ ನಗರದಲ್ಲಿರುವ ಹಲವಾರು ವರ್ತಕರು ಅನ್ನ ಸಂತರ್ಪಣೆಗಾಗಿ ತಮ್ಮಿಂದಾದ ಸಾಹಿತ್ಯ ನೀಡುವ ಕುರಿತು ತಿಳಿಸಿದ್ದು, ಡಿ.27 ರಂದು ದರ್ಬೆ ವೃತ್ತದಿಂದ ನಡೆಯುವ ಹೊರೆಕಾಣಿಕೆ ಮೆರವಣಿಗೆ ಸಂದರ್ಭ ವ್ಯಾಪಾರಸ್ಥರು ನೀಡುವ ಸಾಹಿತ್ಯವನ್ನು ನೀಡುವವರಿದ್ದಾರೆ ಎಂದು ತಿಳಿಸಿದರು. ವಿಶೇಷವಾಗಿ ಅಂದು ಅರುಣ ಸಾರಥಿ ಆಟೋದಲ್ಲಿ ಕಾರ್ಯಕ್ರಮ ವೀಕ್ಷಿಸಿ ತಾಲೂಕಿನ ದೂರದ ಕಡೆಗಳಿಗೆ ಹೋಗುವವರಿಗೆ ಉಚಿತವಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇಷ್ಟು ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುವುದು ಎಂದರು.
ಕಳೆದ ಬಾರಿಯ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮಹಾನಿವೇದನೆ ಸೇವೆ ಮಾಡಿಸಿದವರ ಕೋರಿಗೆ ಈಡೇರಿದ್ದು, ಈ ಬಾರಿಯೂ ಮಹಾನಿವೇದನೆ ಸೇವೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಉಪಸ್ಥಿತರಿದ್ದರು.