ಅವರು ಬರೆದ 900 ಹಿಂದಿ ಹಾಡುಗಳು ಕೂಡ ಸೂಪರ್ ಹಿಟ್
ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದಿದ್ದ ನನಗೆ 60-70ರ ದಶಕದ ಕೆಲವು ಅದ್ಭುತವಾದ ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.
ಆ ಕವಿ ಯಾರು? ಎಂದು ಹುಡುಕುತ್ತಾ ಹೋದಾಗ ನನಗೆ ವಿಸ್ಮಯವೇ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ ಬರೆದ 900 ಸಿನೆಮಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಹಿಂದಿ ಗೀತೆಗಳು ಅವರ ಹರಿತ ಲೇಖನಿಯಿಂದ ಮೂಡಿಬಂದು ಅಮರತ್ವವನ್ನು ಪಡೆದವು. ಆ ಕವಿ ಶೈಲೇಂದ್ರ.
ಈ ಹಾಡುಗಳು ಮರೆತು ಹೋಗಲು ಸಾಧ್ಯವೇ ಇಲ್ಲ
ಶೈಲೇಂದ್ರ ಬರೆದಿರುವ, ನನಗೆ ತುಂಬಾ ಇಷ್ಟವಾದ ಕೆಲವು ಹಾಡುಗಳನ್ನು ನಾನು ಆರಂಭದಲ್ಲಿಯೇ ತಮಗೆ ಪರಿಚಯ ಮಾಡಬೇಕು.
ಮೇರಾ ಜೂತಾ ಹೈ ಜಪಾನಿ,
ಏ ಪಥಲೂನ್ ಇಂಗ್ಲಿಷ್ ಸ್ಥಾನಿ,
ಸರ್ ಪೆ ಲಾಲ್ ಟೋಪಿ ರೂಸಿ,
ಫಿರ್ ಭಿ ದಿಲ್ ಹಿಂದೂಸ್ತಾನಿ
ಹಿಂದಿ ಸಿನೆಮಾ ರಂಗದ ಮಹಾನ್ ಶೋಮ್ಯಾನ್ ಆದ ರಾಜ್‌ಕಪೂರ್ ಅಭಿನಯದ ‘ಶ್ರೀ 420’ ಸಿನೆಮಾದ ‘ಮೇರಾ ಜೂತಾ ಹೈ ಜಪಾನಿ…..’ ಈ ಹಾಡನ್ನು ಕೇಳದವರೇ ಇಲ್ಲ. ಅದು ಅಪ್ಪಟ ದೇಶಪ್ರೇಮದ ಹಾಡು. ಈ ಹಾಡನ್ನು ನಾವು ಕೇಳುತ್ತಾ ಹೋದಂತೆ ಹಲವು ಸಂಸ್ಕೃತಿಗಳ ಮಧ್ಯೆ ಕಳೆದು ಹೋದರೂ ಭಾರತವನ್ನು ಅಗಾಧವಾಗಿ ಪ್ರೀತಿಸುವ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತದೆ. ಇದನ್ನು ಬರೆದವರು ಶೈಲೇಂದ್ರ.
ಅದೇ ರಾಜಕಪೂರ್ ಮತ್ತು ನರ್ಗೀಸ್ ರಭಸವಾಗಿ ಸುರಿವ ಮಳೆಯಲ್ಲಿ ಒಂದೇ ಕೊಡೆಯ ಅಡಿಯಲ್ಲಿ ಒದ್ದೆಯಾಗಿ ನಿಂತು ಹಾಡುವ ‘ಪ್ಯಾರ್ ಹುವಾ ಇಕರಾರ್ ಹುವಾ ಹೈ’ ಎವರ್ ಗ್ರೀನ್ ರೊಮ್ಯಾಂಟಿಕ್ ಹಾಡು. ಬ್ರಹ್ಮಚಾರಿ ಚಿತ್ರದ ‘ಮೈ ಗಾವೂ ತೂ ಸೋ ಜಾವೋ’ ಎಂಬ ಜೋಗುಳವನ್ನು ಯಾರು ಮರೆಯಲು ಸಾಧ್ಯ? ಅತ್ಯಂತ ಜನಪ್ರಿಯ ಆದ ಮೇರಾ ನಾಮ್ ಜೋಕರ್ ಸಿನೆಮಾದ ‘ಜಾನೆ ಕಹಾಂ ಗಯೇ ಓ ದಿನ್’ ಸಾರ್ವಕಾಲಿಕ ವಿಷಾದದ ಗೀತೆಯನ್ನು ಎಷ್ಟು ಬಾರಿ ಕೇಳಿದರೂ ನಮಗೆ ಸಾಕು ಅನ್ನಿಸುವುದಿಲ್ಲ.

ಈ ಹಾಡುಗಳ ಸಾಹಿತ್ಯಕ್ಕೆ ನೀವು ಶಾಭಾಶ್ ಅನ್ನುತ್ತೀರಿ
ಖೊಯಾ ಖೋಯಾ ಚಾಂದ್ (ಕಾಲಾ ಬಝಾರ್) ಹಾಡಂತೂ ಅದ್ಭುತ. ರಮಯ್ಯ ವಸ್ತಾವಯ್ಯ, ಗಾಥಾ ರಹೇ ಮೇರಾ ದಿಲ್…. ಇಂಥ ಹಾಡುಗಳು ಒಮ್ಮೆ ಕೇಳಿದರೆ ನಮ್ಮನ್ನು ಕಾಡದೇ ಇರಲು ಸಾಧ್ಯವೇ ಇಲ್ಲ. ಈ ಹಾಂಟಿಂಗ್ ಮೆಲೋಡಿ ಹಾಡುಗಳು ನಮ್ಮನ್ನು ಕಾಡದೆ ಇರುವುದಿಲ್ಲ. ಅದು ಬಂಗಾರದ ಉಂಗುರದ ನಡುವೆ ವಜ್ರದ ಹರಳನ್ನು ಫಿಟ್ ಮಾಡಿದ ಹಾಗೆ ಇರುವ ಕ್ಲಾಸಿಕ್ ಸಾಹಿತ್ಯ ಅದು. ಇವೆಲ್ಲವನ್ನೂ ಸೊಗಸಾಗಿ ಬರೆದವರು ಅಮರ ಕವಿಯಾದ ಶೈಲೇಂದ್ರ.
ಬಾಲ್ಯದ ಅಪಮಾನವನ್ನು ಮೆಟ್ಟಿ ನಿಂತ ಕ್ರಾಂತಿಕವಿ
ಶೈಲೇಂದ್ರ ಹುಟ್ಟಿದ್ದು ಈಗ ಪಾಕಿಸ್ಥಾನದ ಭಾಗ ಆಗಿರುವ ರಾವಲ್ಪಿಂಡಿಯಲ್ಲಿ. ಅವರ ತಂದೆ ಒಬ್ಬ ಸಮಗಾರ ಆಗಿದ್ದರು. ಅವರು ಬಾಲ್ಯವನ್ನು ಕಳೆದದ್ದು ಉತ್ತರ ಪ್ರದೇಶದ ಮಥುರಾದಲ್ಲಿ. ಬಡತನ ಮತ್ತು ದಲಿತ ಎಂಬ ಕಾರಣಕ್ಕೆ ಅಪಮಾನ. ಶಾಲೆಗೆ ಹೋದದ್ದೇ ಕಡಿಮೆ. ಮುಂಬಯಿಗೆ ಬಂದು ಉದ್ಯೋಗ ಆರಂಭಿಸಿದ್ದು ಮಾಟುಂಗಾ ರೈಲು ನಿಲ್ದಾಣದಲ್ಲಿ ವೆಲ್ಡಿಂಗ್ ಕೆಲಸ. ಬಾಲ್ಯದಲ್ಲಿ ಅಸಾಧ್ಯವಾದ ನೋವು ಮತ್ತು ಅಪಮಾನದಿಂದ ನೊಂದುಕೊಂಡು ಕ್ರಾಂತಿಗೀತೆಗಳನ್ನು ಬರೆಯಲು ಆರಂಭ ಮಾಡಿದರು. ಹಲವೆಡೆ ನಡೆದ ಕವಿ ಸಮ್ಮೇಳನಗಳಲ್ಲಿ ಕ್ರಾಂತಿಕಾರಿಯಾದ ಕವಿತೆಗಳನ್ನು ಓದಿದರು. ‘ಜಲ್ತಾ ಹೈ ಪಂಜಾಬ್’ ಎಂಬ ಕ್ರಾಂತಿಗೀತೆ ಸೂಪರ ಹಿಟ್ ಆಯಿತು.
ಉತ್ಕಟ ಹಸಿವು ಇದ್ದರೂ ಕ್ರಾಂತಿಗೀತೆ ಮಾರಲಿಲ್ಲ
ಆ ಗೀತೆಯನ್ನು ತನ್ನ ನಿರ್ದೇಶನದ ಮೊದಲ ಸಿನೆಮಾ (ಆಗ್)ನಲ್ಲಿ ಬಳಸಿಕೊಳ್ಳಲು ರಾಜಕಪೂರ್ ಅವರು ಶೈಲೇಂದ್ರ ಅವರನ್ನು ಸಂಪರ್ಕಿಸಿದ್ದರು. ಆಗಿನ ಕಾಲಕ್ಕೆ ಬಹಳ ದೊಡ್ಡ ಮೊತ್ತ 500 ರೂ. ಸಂಭಾವನೆ ನೀಡಲು ಮುಂದಾಗಿದ್ದರು. ಆದರೆ ಹಸಿವು, ಬಡತನದ ಬವಣೆಯನ್ನು ಪಡುತ್ತಿದ್ದರು ಕೂಡ ಶೈಲೇಂದ್ರ ಆ ಹಾಡನ್ನು ಮಾರಾಟ ಮಾಡಲು ಒಪ್ಪಲಿಲ್ಲ. ಆದರೂ ರಾಜ್‌ಕಪೂರ್ ಆ ಐನೂರು ರೂಪಾಯಿ ಹಣವನ್ನು ಶೈಲೇಂದ್ರ ಅವರ ಕಿಸೆಗೆ ತುರುಕಿ
‘ನಿಮಗೆ ಬೇಕೆನಿಸಿದಾಗ ಬಂದು ಭೇಟಿ ಮಾಡಿ’ ಎಂದಿದ್ದರು. ಸುಮಾರು ಎರಡು ತಿಂಗಳಾದ ನಂತರ ಶೈಲೇಂದ್ರ ಅವರೇ ರಾಜ್‌ಕಪೂರ್ ಅವರನ್ನು ಭೇಟಿ ಮಾಡಿ ಅವರ ಮುಂದಿನ ಸಿನೆಮಾಕ್ಕೆ ಎರಡು ಚಂದದ ಹಾಡು ಬರೆದುಕೊಟ್ಟು ಅವರ ಸಾಲ ತೀರಿಸಿದರು. ಅಲ್ಲಿಂದ ಮುಂದೆ ರಾಜ್‌ಕಪೂರ್ ಅವರ ಹೆಚ್ಚು ಕಡಿಮೆ ಎಲ್ಲಾ ಸಿನೆಮಾಗಳಿಗೆ ಹಾಡು ಬರೆದದ್ದು ಇದೇ ಶೈಲೇಂದ್ರ.

ಹಿಂದಿ ಸಿನೆಮಾದ ಪವರಫುಲ್ ಕಾಂಬಿನೇಶನ್ ಅದು
ನಿರ್ದೇಶಕ ರಾಜ್‌ಕಪೂರ್ – ಸಾಹಿತಿ ಶೈಲೇಂದ್ರ – ಸಂಗೀತ ನಿರ್ದೇಶಕ ಶಂಕರ್ ಜೈಕಿಷನ್- ಗಾಯಕ ಮುಖೇಶ್. ಇದು ಹಿಂದಿ ಸಿನೆಮಾ ರಂಗ ಕಂಡಂಥ ಮೋಸ್ಟ್ ಸಕ್ಸೆಸಫುಲ್ ಕಾಂಬಿನೇಷನ್. ಆ ಕಾಂಬಿನೇಶನ್ ಕೊಟ್ಟ ಅಷ್ಟೂ ಹಾಡುಗಳು ಸ್ಮರಣೀಯ.
ಆಗ ಆಕಾಶವಾಣಿಯಲ್ಲಿ ‘ಬಿನಾಕಾ ಗೀತಮಾಲಾ’ ಎಂಬ ಭಾರಿ ಜನಪ್ರಿಯ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ಪ್ರತಿ ವಾರಕ್ಕೊಮ್ಮೆ ಟಾಪ್ ಟೆನ್ ಹಾಡುಗಳನ್ನು ಪರಿಚಯಿಸುವ ಅಪೂರ್ವ ಕಾರ್ಯಕ್ರಮ ಅದು. 70-80ರ ದಶಕದಲ್ಲಿ ಹೆಚ್ಚು ಕಡಿಮೆ ಪ್ರತಿ ವಾರದ ಟಾಪ್ ಟೆನ್ ಹಾಡುಗಳಲ್ಲಿ ಐದಾರು ಇದೇ ಯಶಸ್ವೀ ಕಾಂಬಿನೇಶನ್ ಕೊಟ್ಟ ಹಾಡು ಪ್ರಸಾರ ಆಗುತ್ತಿದ್ದವು. ಮೇರಾ ಜೂತಾ ಹೈ ಜಪಾನಿ ಅಂತೂ ಇಂದು ಕೂಡ ಮುಂಬಯಿಯ ಮದುವೆಯ ಬ್ಯಾಂಡ್‌ಗಳಲ್ಲಿ ನುಡಿಸಲ್ಪಡುವ ಹಾಡು. ಪ್ಯಾರ್ ಹುವಾ ಇಕರಾರ್ ಹುವಾ ಹಾಡಿನ ಮೆಲೋಡಿಯು ಈಗಿನ ಯುವಜನತೆಗೆ ಕೂಡ ಇಷ್ಟ ಆಗುತ್ತದೆ. ರಾಜ್‌ಕಪೂರ್ ತನ್ನ ಕವಿಯನ್ನು ಅಷ್ಟೇ ಪ್ರೀತಿ ಮಾಡಿದರು. ಅವರನ್ನು ಕವಿರಾಜ್ ಎಂದು ಕರೆದರು.
ಶೈಲೇಂದ್ರ ಕೇವಲ ರಾಜ್‌ಕಪೂರ್ ಸಿನೆಮಾಗಳಿಗೆ ಮಾತ್ರ ಅಲ್ಲದೆ ದೇವಾನಂದ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್, ಅಶೋಕ್ ಕುಮಾರ್, ನರ್ಗೀಸ್, ವಹೀದಾ ರಹಮಾನ್ ಮೊದಲಾದವರ ಸಿನೆಮಾಗಳಿಗೂ ಹಾಡು ಬರೆದರು. ಆ ಕಾಲದ ಭಾರಿ ಜನಪ್ರಿಯ ಸಂಗೀತ ನಿರ್ದೇಶಕರಾದ ಎಸ್.ಡಿ. ಬರ್ಮನ್, ಮನ್ನಾಡೆ, ಶಂಕರ್ ಜೈಕಿಶನ್, ಆರ್.ಡಿ. ಬರ್ಮನ್, ರೋಷನ್, ಸಲೀಲ್ ಚೌಧರಿ ಮೊದಲಾದವರು ಶೈಲೇಂದ್ರರ ಕೈಯ್ಯಲ್ಲಿ ಅತ್ಯಂತ ಸುಂದರವಾದ ಗೀತೆಗಳನ್ನು ಬರೆಸಿದರು. ಶೈಲೇಂದ್ರ ಅವರ ಲೇಖನಿಯಿಂದ ಹಾಡುಗಳಿಗೆ ಅಮರತ್ವ ಪ್ರಾಪ್ತಿ ಆಯಿತು.
ಶುದ್ಧ ಹಿಂದಿಯ ದೇಸಿ ಹಾಡುಗಳು
ಅದುವರೆಗೂ ಬಾಲಿವುಡ್ ಸಿನಿಮಾಗಳಲ್ಲಿ ಹಾಡನ್ನು ಬರೆದವರು ಉರ್ದು ಮತ್ತು ಪರ್ಷಿಯನ್ ಶಬ್ದಗಳಿಂದ ತಮ್ಮ ಗೀತೆಗಳನ್ನು ಸಿಂಗರಿಸಿದ್ದರೆ ಶೈಲೇಂದ್ರ ಶುದ್ಧವಾದ ದೇಸಿ ಭಾಷೆಯ ಹಿಂದಿ ಶಬ್ದಗಳನ್ನೇ ಬಳಸಿದರು. ಅದು ಅವರ ಭಾರಿ ಜನಪ್ರಿಯತೆಗೆ ಕಾರಣವಾಯಿತು. ಪ್ರಣಯ, ವಿರಹ, ವಿಷಾದ, ಕೀಟಲೆ, ಜೋಗುಳ, ಹತಾಶೆ, ಅಧ್ಯಾತ್ಮ, ಪ್ರೀತಿ, ಹಾಸ್ಯ, ನೋವು, ಭರವಸೆ, ಐರನಿ…. ಇವೆಲ್ಲವೂ ಅವರ ಹಾಡುಗಳ ವಸ್ತು ಆಗಿಬಿಟ್ಟವು.
ಎಲ್ಲವನ್ನೂ ಹದವಾಗಿ ಬೆರೆಸಿ ಅವರು ಪ್ರತಿಯೊಂದು ಹಾಡನ್ನೂ ಸ್ಮರಣೀಯ ಮಾಡಿದ್ದಾರೆ. ಅದರಲ್ಲಿ ಸಾಕಷ್ಟು ಹಾಡುಗಳನ್ನು ಅವರು 15-20 ನಿಮಿಷಗಳಲ್ಲಿ ಬರೆದು ಮುಗಿಸಿದ್ದಾರೆ ಅಂದರೆ ಅವರ ದೈತ್ಯ ಪ್ರತಿಭೆಯ ಪರಿಚಯ ಆಗುತ್ತದೆ.
ಈ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ
ಮಧುಮತಿ, ಬರ್ಸಾತ್, ಗೈಡ್, ಆವಾರಾ, ಶ್ರೀ 420, ದೋ ಭಿಗಾ ಜಮೀನ್, ಬಸಂತ್ ಬಹಾರ್, ಚೋರಿ ಚೋರಿ, ದಿಲ್ ಏಕ್ ಮಂದಿರ್, ಅನಾಡಿ, ತೀಸ್ರಿ ಕಸಂ, ಸಂಗಂ, ಬಂದಿನಿ, ಕಾಲಾ ಬಝಾರ್, ಮೇರಾ ನಾಮ್ ಜೋಕರ್, ಆಗ್, ಆಮ್ರಪಾಲಿ, ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ…..ಹೀಗೆ ಸಾಲು ಸಾಲು ಹಿಂದಿ ಚಿತ್ರಗಳು ಮ್ಯೂಸಿಕಲ್ ಹಿಟ್ ಆಗಲು ಕಾರಣ ಶೈಲೇಂದ್ರ ಅವರ ದೈತ್ಯ ಪ್ರತಿಭೆ. ಈ ಮುಖ್ಯ ಕಾರಣಕ್ಕೆ ಅವರನ್ನು ರಷ್ಯನ್ ಮಹಾಕವಿ ಪುಷ್ಕಿನ್ ಅವರಿಗೆ ಹೋಲಿಕೆ ಮಾಡಲಾಗುತ್ತದೆ.

ಆವಾರಾ ಹೂಂ…ಚೀನಾದಲ್ಲಿ ಈಗಲೂ ಜನಪ್ರಿಯ ಹಾಡು
ಅವರು ಬರೆದ ‘ಆವಾರಾ ಹೂಂ’ ಗೀತೆಯನ್ನು ಚೀನಾದ ಮಹಾದಂಡನಾಯಕರಾದ ಮಾವೋ ತ್ಸೇ ತುಂಗ್ ತಮ್ಮ ಡೈರಿಯ ಮೊದಲ ಪುಟದಲ್ಲಿಯೇ ಬರೆದು ಜೋಪಾನವಾಗಿ ಇಟ್ಟುಕೊಂಡಿದ್ದರು. ಅವರು ಬರೆದ ಅಷ್ಟೂ ಹಾಡುಗಳು ರಷ್ಯಾದಲ್ಲಿ ಇಂದಿಗೂ ಜೀವಂತ ಆಗಿವೆ. ಅವರು ಬರೆದ ಯಾವ ಹಾಡಿಗೂ ಸಾವಿಲ್ಲ ಅನ್ನುವುದು ನನ್ನ ಅಭಿಪ್ರಾಯ.
ಅಂತಹ ಮೇರು ಕವಿ ತನ್ನ 43ನೆಯ ವಯಸ್ಸಿನಲ್ಲಿ ನಿಧನರಾದಾಗ ಇಡೀ ಸಿನೆಮಾರಂಗ ಕಂಬನಿ ಮಿಡಿಯಿತು. ನನ್ನ ಚೈತನ್ಯದ ಮುಖ್ಯವಾದ ಭಾಗವನ್ನು ನಾನಿಂದು ಕಳೆದುಕೊಂಡೆ ಎಂದು ರಾಜ್‌ಕಪೂರ್ ಕಂಬನಿ ಮಿಡಿದಿದ್ದರು. 2013ರಲ್ಲಿ ಭಾರತದ ಅಂಚೆ ಇಲಾಖೆಯು ಅವರ ಚಿತ್ರ ಇರುವ ಅಂಚೆ ಚೀಟಿಯನ್ನು ಹೊರತಂದು ಅವರಿಗೆ ಗೌರವ ಕೊಟ್ಟಿತು. ಅವರು ಬಾಲ್ಯದಲ್ಲಿ ಓಡಾಡಿದ ಮಥುರಾದ ಮುಖ್ಯರಸ್ತೆಗೆ ಅವರ ಹೆಸರನ್ನು ಇಡಲಾಗಿದೆ.
ಶೈಲೇಂದ್ರ ಬರೆದ ಇನ್ನೂ ಕೆಲವು ಅಮರ ಹಾಡುಗಳು
ಅವರು ಬರೆದಿರುವ ಇನ್ನೂ ಕೆಲವು ಸೂಪರ್ ಹಿಟ್ ಹಾಡುಗಳನ್ನು ಪಟ್ಟಿ ಮಾಡುತ್ತ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವೆ.
1) ಯೇ ರಾತ್ ಭೀಗಿ ಭೀಗೀ (ಚೋರಿ ಚೋರಿ)
2) ತೇರೆ ಮೇರೆ ಸಪ್‌ನೆ ಅಬ್ ಏಕ್ ರಂಗ್ ಹೈ (ಗೈಡ್)
3) ಸಜನ್ ರೆ ಝೂಟ್ ಮತ್ ಬೋಲೋ (ತೀಸರಿ ಆಂಖ್)
4) ಸುಹಾನಾ ಸಫರ್ (ಮಧುಮತಿ)
5) ಮುಡ್ ಮೂಡ್ ಕೆ ನ ದೇಖ್ (ಶ್ರೀ 420)
6) ದೋಸ್ತ್ ದೋಸ್ತ್ ನಾ ರಹಾ (ಸಂಗಂ)
7) ಅಜೀಬ್ ದಾಸ್ತಾ ಯಹೀ (ದಿಲ್ ಅಪ್ನ ಓರ್ ಪ್ರೀತ್ ಪರಾಯ)
8) ಮತ್ ರೋ ಮಾತಾ ಲಾಲ್ ತೇರೆ (ಬಂದಿನಿ)
9) ಖೋಯಾ ಖೊಯಾ ಚಾಂದ್ (ಕಾಲಾ ಬಝಾರ್)
10) ಆಜ್ ಫಿರ್ ಜೀನೆ ಕೀ ತಮನ್ನ ಹೈ (ಗೈಡ್)
ಈ ಹಾಡುಗಳನ್ನು ಕಣ್ಣು ಮುಚ್ಚಿ ಆಲಿಸುತ್ತ ಈ ಆಮರಕವಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡೋಣ ಅಲ್ಲವೇ?
ರಾಜೇಂದ್ರ ಭಟ್ ಕೆ.