ಅಶ್ಲೀಲ ಪದ ಹೇಳಿದ್ದಾರೆಯೇ ಎಂದು ತಿಳಿಯಲು ತನಿಖೆ
ಬೆಂಗಳೂರು : ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನದ ಕೊನೆಯ ದಿನವಾದ ಡಿ.19ರಂದು ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿ.ಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವಿನ ರಾದ್ಧಾಂತದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಅಶ್ಲೀಲ ಪದ ಬಳಸಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ. ಸಭಾಪತಿ ತಮ್ಮ ಕೆಲಸ ಮಾಡಿದ್ದಾರೆ, ಪೊಲೀಸರು ತನಿಖೆ ಮಾಡಬೇಕು ಎಂದರು.
ಅಸಮರ್ಥ ಗೃಹ ಸಚಿವ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು. ಪ್ರಹ್ಲಾದ್ ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ನಾನು ಜೋಶಿ ಅವರನ್ನು ಅಸಮರ್ಥ ಕೇಂದ್ರ ಸಚಿವ ಎಂದು ಹೇಳಬಹುದು. ಆದರೆ, ಅದು ಎಷ್ಟು ಸಮಂಜಸ ಹೇಳಿ? ಎಂದರು.
ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಗಾಂಧೀಜಿ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರಾಗಿ ನೂರು ವರ್ಷ ಕಳೆದಿದೆ. ಕಾರ್ಯಕ್ರಮದಲ್ಲಿ ಇಡೀ ಕಾಂಗ್ರೆಸ್ ಸಮುದಾಯ ಭಾಗಿಯಾಗುತ್ತೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದ ತಿಳಿಸಿದರು.