ಪುತ್ತೂರು: ವಿಟ್ಲದಲ್ಲಿ ಮಂಜೂರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ಈಗಾಗಲೇ 2 ಕೋಟಿ ಅನುದಾನ ಮಂಜೂರುಗೊಳಿಸಲು ವಿಳಂಬ ಮಾಡಿರುವ ಹಿನ್ನಲೆಯಲ್ಲಿ ಸರಕಾರದ ವಿರುದ್ಧ ಡಿ.30 ರಂದು ಕಬಕ ವೃತ್ತದಿಂದ ಶಾಸಕರ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರಿಗೆ ಮನವಿ ಸಲ್ಲಿಸಿದ ಬಳಿಕವೂ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ದಲಿತ ಏಳು ಸಮುದಾಯವನ್ನು ಸೇರಿಸಿಕೊಂಡು ಜನವರಿ 30 ರಂದು ಧರಣಿ ಉಪವಾಸ ನಡೆಸಲಿದ್ದೇವೆ. ಇದಕ್ಕಾಗಿ ಸದ್ಯದಲ್ಲೇ ದಲಿತ ಸಮನ್ವಯ ಸಮಿತಿ ರಚಿಸಿ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ವಿಟ್ಲ ಕಸಬಾ ಗ್ರಾಮದ 477/4ಬಿಎ 17 ಸೆಂಟ್ಸ್ ಜಾಗ ಮಂಜೂರುಗೊಂಡಿದ್ದು, ಭವನ ನಿರ್ಮಿಸಲು ಅನುದಾನ ಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಶಾಸಕರ ಮೂಲಕ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪರನ್ನು ಭೇಟಿ ಮಾಡಿದಾಗ ತುರ್ತಾಗಿ ಒಂದು ಕೋಟಿ ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಭರವಸೆ ನೀಡಿ ಒಂದು ವರ್ಷ ಕಳೆಯಿತು. ಆದರೆ ಈ ವರೆಗೆ ಒಂದು ನಯಾಪೈಸೆ ಅನುದಾನ ಬಂದಿಲ್ಲ. ಸರಕಾರವನ್ನು ಮತ್ತೊಮ್ಮೆ ಎಚ್ಚರಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಪ್ರಮುಖರಾದ ಸೋಮಪ್ಪ, ಪ್ರಸಾದ್ ಬೊಳ್ನಾರು, ಅಣ್ಣಪ್ಪ ಕಾರೆಕ್ಕಾಡು, ಲೋಕೇಶ್ ತೆಂಕಿಲ ಉಪಸ್ಥಿತರಿದ್ದರು.