ಪುಣೆ: ಫುಟ್‌ಪಾತ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಹರಿದು ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ತಡರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಚಾಲಕ ಪಾನಮತ್ತನಾಗಿದ್ದು ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಾತ್ರಿ ಸುಮಾರು 1 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.
ಮೃತರನ್ನು ವಿಶಾಲ್ ಪವಾರ್ (22) ಮತ್ತು ಪುಟ್ಟ ಮಕ್ಕಳಾದ ವೈಭವಿ ಪವಾರ್(1), ವೈಭವ್ ರಿತೇಶ್ ಪವಾರ್ (2) ಎಂದು ಗುರುತಿಸಲಾಗಿದೆ. ಎಲ್ಲರೂ ಅಮರಾವತಿಯವರಾಗಿದ್ದಾರೆ. ಪುಣೆಯ ವಾಘೋಲಿಯಲ್ಲಿ ಮಧ್ಯರಾತ್ರಿ 1ರ ಸುಮಾರಿಗೆ ಪಾನಮತ್ತ ಟ್ರಕ್ ಚಾಲಕ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಸಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಶಾನಂದ ಫಾಟಾ ಪ್ರದೇಶದ ಬಳಿ ಫುಟ್‌ಪಾತ್‌ನಲ್ಲಿ ಅನೇಕ ಜನರು ಮಲಗಿದ್ದರು, ಅವರಲ್ಲಿ ಹೆಚ್ಚಿನವರು ಕಾರ್ಮಿಕರಾಗಿದ್ದರು. ಅವರ ಮೇಲೆ ಟ್ರಕ್ ಹರಿದಿದೆ. ಪಾನಮತ್ತನಾಗಿದ್ದ ಟ್ರಕ್ ಚಾಲಕನನ್ನು ಬಂಧಿಸಿ ಮೋಟಾರು ವಾಹನ ಕಾಯ್ದೆ ಮತ್ತು ಬಿಎನ್ಎಸ್ ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.