ನಿಷೇಧಿತ ಖಲಿಸ್ಥಾನ್ ಕಮಾಂಡೊ ಫೋರ್ಸ್‌ಗೆ ಸೇರಿದ ಉಗ್ರರು
ಲಖನೌ: ನಿಷೇಧಿತ ಖಲಿಸ್ತಾನ್ ಕಮಾಂಡೊ ಫೋರ್ಸ್‌ನ (ಖಲಿಸ್ತಾನ್ ಜಿಂದಾಬಾದ್ ಫೋರ್ಸ್) ಸಂಘಟನೆಯ ಮೂವರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ. ಸೋಮವಾರ ಮುಂಜಾನೆ ಈ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಹತರಾದ ಖಲಿಸ್ಥಾನಿ ಭಯೋತ್ಪಾದಕರನ್ನು ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ ಕೃತ್ಯದಲ್ಲಿ ಶಾಮೀಲಾಗಿದ್ದರು ಎಂದು ತಿಳಿದುಬಂದಿದೆ.
ಉಗ್ರರಿಂದ ಪೊಲೀಸರು ಎರಡು ಎಕೆ-47 ರೈಫಲ್‌ಗಳು, ಎರಡು ಗ್ಲಾಕ್ ಪಿಸ್ತೂಲ್‌ಗಳು ಮತ್ತು ಹಲವು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಲಿಭಿತ್ ಜಿಲ್ಲೆಯ ಪೂರಣ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಮೂವರು ಉಗ್ರರು ಇರುವ ಬಗ್ಗೆ ಪಂಜಾಬ್ ಪೊಲೀಸರ ತಂಡ ಪಿಲಿಭಿತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಮಾಹಿತಿಯ ಆಧಾರದ ಮೇಲೆ, ಪೊಲೀಸರು ಕಾರ್ಯಚರಣೆಗೆ ತೆರಳಿದಾಗ ಮೂವರು ಭಯೋತ್ಪಾದಕರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು. ಪೊಲೀಸರ ಪ್ರತಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟರು. ಪಂಜಾಬ್ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಪಂಜಾಬ್ ಪೊಲೀಸ್ ತಂಡವು ಅವರ ವಿದೇಶಿ ಸಂಪರ್ಕಗಳ ಬಗ್ಗೆಯೂ ತಿಳಿಸಿದೆ. ಡಿಸೆಂಬರ್ 21ರಂದು ರಾತ್ರಿ ಗುರುದಾಸ್‌ಪುರ ಜಿಲ್ಲೆಯ ಕಲಾನೌರ್ ಉಪವಿಭಾಗದಲ್ಲಿರುವ ಪೊಲೀಸ್ ಪೋಸ್ಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಆದರೆ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ.