ಡಿ.25ರಂದು ಮಂಡಲ ಪೂಜೆಗೆ ಸನ್ನಿಧಾನ ತಲುಪಲಿರುವ ಪವಿತ್ರ ಆಭರಣ
ಶಬರಿಮಲೆ : ಶಬರಿಮಲೆ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಅಂಗವಾಗಿರುವ ತಂಗ ಅಂಗಿಯ ಮೆರವಣಿಗೆ ಇಂದು ಶುರುವಾಗಿದೆ. ಪತ್ತನತಿಟ್ಟಂ ಜಿಲ್ಲೆಯ ಆರಣ್ಮುಲದಲ್ಲಿ ಪಾರ್ಥಸಾರಥಿ ದೇಗುಲದಿಂದ ಸಕಲ ವಿಧಿವಿಧಾನಗಳೊಂದಿಗೆ ಅಯ್ಯಪ್ಪನ ಪವಿತ್ರ ಆಭರಣಗಳನ್ನು ಮಂಡಲ ಪೂಜೆಗಾಗಿ ಶಬರಿಮಲೆಗೆ ತರುವ ಯಾತ್ರೆ ಇದು.
ತಂಗ ಅಂಗಿ ಅಥವಾ ಪವಿತ್ರ ಆಭರಣಗಳನ್ನು ಮಂಡಲ ಪೂಜೆ ಸಂದರ್ಭದಲ್ಲಿ ಅಯ್ಯಪ್ಪನಿಗೆ ತೊಡಿಸಿ ಅಲಂಕರಿಸಲಾಗುತ್ತದೆ. ಡಿ.25ರಂದು ಈ ಮೆರವಣಿಗೆ ಸನ್ನಿಧಾನ ತಲುಪಲಿದೆ. ಈ ಒಡವೆಗಳನ್ನು ತೊಡಿಸಿದ ಬಳಿಕ ಅಯ್ಯಪ್ಪನಿಗೆ ವಿಶೇಷ ದೀಪಾರಾಧನೆ ನೆರವೇರಿಸಲಾಗುತ್ತದೆ.
ತಂಗ ಅಂಗಿಯ ಮೆರವಣಿಗೆ ಹೊರಡುವ ಮೊದಲು ಸಾವಿರಾರು ಭಕ್ತರು ಪಾರ್ಥಸಾರಥಿ ದೇಗುಲದಲ್ಲಿ ಅದರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಿಶೇಷವಾದ ರಥದಲ್ಲಿಟ್ಟು ಈ ಆಭರಣಗಳನ್ನು ಕಾಲ್ನಡಿಗೆಯಲ್ಲೇ ಶಬರಿಮಲೆಗೆ ತರಲಾಗುತ್ತದೆ. ದಾರಿಮಧ್ಯೆ ಮೂರು ದಿನ ಮೂರು ದೇವಸ್ಥಾನಗಳಲ್ಲಿ ಈ ಯಾತ್ರೆ ತಂಗುತ್ತದೆ. ಸಾಕಷ್ಟು ಪೊಲೀಸ್ ಬಂದೋಬಸ್ತಿನಲ್ಲಿ ಕಾಲ್ನಡಿಗೆ ಯಾತ್ರೆ ಸಾಗಿಬರುತ್ತದೆ.
ಮೊದಲ ದಿನ ಓಮಲ್ಲೂರು ಶ್ರೀ ರಕ್ತಕಂಠಸ್ವಾಮಿ ದೇವಸ್ಥಾನ, ಎರಡನೇ ದಿನ ಕೊನ್ನಿ ಮುರಿಂಗಮಂಗಲಂ ಶ್ರೀ ಮಹಾದೇವ ದೇವಸ್ಥಾನ ಮತ್ತು ಮೂರನೇ ದಿನ ರನ್ನಿ ಪೆರುನಾಡ್ ಶ್ರೀ ಧರ್ಮಶಾಸ್ತ ದೇಗುಲದಲ್ಲಿ ಮೆರವಣಿಗೆ ತಂಗುತ್ತದೆ. ಡಿ.25ರಂದು ಶಬರಿಮಲೆ ಏರುವ ಮೊದಲು ನಿಲಕ್ಕಲ್‌ನ ಶಿವ ದೇವಸ್ಥಾನ ಮತ್ತು ಪಂಪೆಯ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಸರಿಯಾಗಿ ತಂಗಅಂಗಿ ಶಬರಿಮಲೆ ಸನ್ನಿಧಾನ ತಲುಪುತ್ತದೆ. ಡಿ.25ರಂದು ಮಂಡಲ ಪೂಜೆ ವಿಧಿ ನೆರವೇರಿಸಲ್ಪಟ್ಟ ಬಳಿಕ ಡಿ.26ರಂದು ಸನ್ನಿಧಾನವನ್ನು ಮುಚ್ಚಲಾಗುವುದು. ಮತ್ತೆ ತೆರೆಯುವುದು ಮಕರ ಜ್ಯೋತಿ ದರ್ಶನ ವಿಧಿಗಳಿಗಾಗಿ ಡಿ.30ರಂದು.