ಲಕ್ಷ್ಮೀ-ರವಿ ರಾದ್ಧಾಂತದಲ್ಲಿ ಮುನ್ನೆಲೆಗೆ ಬಂದ ಹಳೆ ಪ್ರಕರಣಗಳು
ಕಾರ್ಕಳ: ಸಾರ್ವಜನಿಕರ ನೆನಪಿನ ಶಕ್ತಿಗೆ ಬಹಳ ಕಡಿಮೆ ಆಯಸ್ಸು. ಹೀಗಾಗಿ ರಾಜಕಾರಣಿಗಳು ಏನೇ ಮಾಡಿದರೂ, ಮಾತನಾಡಿದರೂ ಕೆಲವೇ ಸಮಯದಲ್ಲಿ ಜನ ಅದನ್ನು ಮರೆತುಬಿಡುತ್ತಾರೆ. ಹೀಗಾಗಿ ರಾಜಕೀಯ ನಾಯಕರು ಏನೇನಲ್ಲ ಮಾಡಿಯೂ ದಕ್ಕಿಸಿಕೊಳ್ಳುತ್ತಾರೆ ಎನ್ನುವುದು ಭಾರತದ ರಾಜಕೀಯದ ಮಟ್ಟಿಗೆ ಸಾರ್ವತ್ರಿಕವಾಗಿರುವ ಒಂದು ಅಭಿಪ್ರಾಯ ಮತ್ತು ಇದು ನಿಜವೂ ಹೌದು. ಆದರೆ ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಜನರು ಮರೆತರೂ ಸೋಷಿಯಲ್ ಮೀಡಿಯಾ ಮಾತ್ರ ಮರೆಯುವುದಿಲ್ಲ. ಎಲ್ಲ ಹಳೆ ವೀಡಿಯೊ, ದಾಖಲೆಗಳನ್ನೆಲ್ಲ ಅದು ತಂದು ನಿಮ್ಮ ಮೊಬೈಲ್‌ಗೆ ಸುರಿಯುತ್ತದೆ. ಹೀಗಾಗಿ ಈಗ ಎಲ್ಲವನ್ನೂ ಅಷ್ಟು ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ತಾಜಾ ಉದಾಹರಣೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ನಡುವೆ ಪರಿಷತ್‌ನಲ್ಲಿ ನಡೆದ ರಾದ್ಧಾಂತ.
ಪ್ರತಿಭಟನೆ ವೇಳೆ ತನ್ನನ್ನು ಅವಾಚ್ಯ ಶಬ್ದದಿಂದ ಲೇವಡಿ ಮಾಡಿದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸುವುದರೊಂದಿಗೆ ಶುರುವಾದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಇಂಗ್ಲಿಷ್‌ನಲ್ಲಿ ತನ್ನನ್ನು ಪ್ರಾಸ್ಟಿಟ್ಯೂಟ್ ಎಂಬುದಾಗಿ ಒಂದಲ್ಲ ಹತ್ತು ಬಾರಿ ಸಿ.ಟಿ ರವಿ ಕರೆದಿದ್ದಾರೆ ಎನ್ನುವುದು ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿರುವ ಆರೋಪ. ತಾನು ಹೇಳಿದ್ದು ಫ್ರಸ್ಟ್ರೇಟ್ ಎಂದು ಅದನ್ನು ಲಕ್ಷ್ಮೀ ಹೆಬ್ಬಾಳ್ಕರ್ ತಿರುಚಿ ಪ್ರಾಸ್ಟಿಟ್ಯೂಟ್ ಮಾಡಿಕೊಂಡಿದ್ದಾರೆ ಎನ್ನುವುದು ಸಿ .ಟಿ. ರವಿ ಕೊಟ್ಟಿರುವ ಸ್ಪಷ್ಟನೆ.
ಸಿ.ಟಿ.ರವಿ ಒಂದು ವೇಳೆ ಪ್ರಾಸ್ಟಿಟ್ಯೂಟ್ ಎಂದು ಹೇಳಿದ್ದರೆ ಇದು ನಿಜವಾಗಿಯೂ ಗಂಭೀರವಾದ ವಿಚಾರ. ಅದರಲ್ಲೂ ಸದನದಂಥ ಸ್ಥಳದಲ್ಲಿ ಈ ರೀತಿ ಶಬ್ದ ಬಳಕೆ ಮಾಡುವುದು ಜನಪ್ರತಿನಿಧಿಗಳಾದವರಿಗೆ ಭೂಷಣವಲ್ಲ. ಇದರ ಸತ್ಯಾಸತ್ಯತೆ ಏನಿದ್ದರೂ ತನಿಖೆಯಿಂದ ಬಹಿರಂಗವಾಗಬೇಕು.
ಆದರೆ ಈ ಗದ್ದಲದ ನಡುವೆ ಈಗ ಉಡುಪಿಯ ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಕೆಲವು ಮುಸ್ಲಿಂ ಹೆಣ್ಣುಮಕ್ಕಳು ಮೊಬೈಲ್ ಕ್ಯಾಮರ ಬಚ್ಚಿಟ್ಟು ಹಿಂದು ಹೆಣ್ಣು ಮಕ್ಕಳ ವೀಡಿಯೊ ಶೂಟಿಂಗ್ ಮಾಡಿದ ಪ್ರಕರಣ ವಿನಾಕಾರಣ ಮುನ್ನೆಲೆಗೆ ಬಂದಿದೆ.
2023ರಲ್ಲಿ ನಡೆದಿರುವ ಈ ಘಟನೆಯನ್ನು ಜನರು ಮರೆತೇ ಬಿಟ್ಟಿದ್ದರು. ಆದರೆ ಆಗ ಈ ಘಟನೆಗೆ ಕಾಂಗ್ರೆಸ್ ನಾಯಕರು ನೀಡಿದ ಪ್ರತಿಕ್ರಿಯೆಗಳೆಲ್ಲ ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಆಗ ಕಾಂಗ್ರೆಸ್ಸಿನ ಹಿರಿ-ಮರಿ ನಾಯಕರೆಲ್ಲ ಇದೊಂದು ಸಣ್ಣ ಘಟನೆ ಎಂಬ ದಾಟಿಯಲ್ಲಿ ಮಾತನಾಡಿ ತಿಪ್ಪೆ ಸಾರಿಸಲು ಯತ್ನಿಸಿದ್ದರು. ಅವರ ಈ ಹೇಳಿಕೆಯ ವೀಡಿಯೊಗಳನ್ನು ಈಗ ಹಂಚಿಕೊಂಡು ಜನ ಕಾಂಗ್ರೆಸ್ಸಿನವರನ್ನು ಪ್ರಶ್ನಿಸುತ್ತಿದ್ದಾರೆ.
ಅಂತೆಯೇ 2018ರಲ್ಲಿ ನಟಿ ಜಯಮಾಲಾ ಕಾಂಗ್ರೆಸ್ ಸರಕಾರದಲ್ಲಿ ಸಚಿವೆಯಾದಾಗ ಆ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಹತಾಶೆಯಲ್ಲಿ ಹೇಳಿದ ಮಾತೊಂದು ಆಗ ಬಹಳ ವಿವಾದಕ್ಕೆ ಗುರಿಯಾಗಿತ್ತು. ತನಗೆ ಮಂತ್ರಿ ಹುದ್ದೆ ಸಿಗದ ಕಾರಣ ನಿರಾಶರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ (ಜಯಮಾಲಾ) ಸೇವೆ ಮೆಚ್ಚಿಕೊಂಡು ನಾಯಕರು ಮಂತ್ರಿ ಮಾಡಿರಬಹುದು ಎಂದು ಹೇಳಿದ್ದರು. ಇಲ್ಲಿ ಸೇವೆಯನ್ನು ದ್ವಂದ್ವಾರ್ಥದಲ್ಲಿ ಬಳಸಿದ್ದಾರೆ ಎನ್ನಲಾಗಿತ್ತು. ಈ ಮಾತಿಗೆ ಅಂದು ಜಯಮಾಲಾ ಕೂಡ ಬಹಳ ಬೇಸರ ವ್ಯಕ್ತಪಡಿಸಿದ್ದರು. ಈ ವೀಡಿಯೊ ಈಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಫೋನಿನಲ್ಲಿ ಮಾತನಾಡುತ್ತಾ ಯಾರಿಗೋ ಸೂ… ಎಂದು ಕರೆದ ವೀಡಿಯೊ ಹಾಗೂ ಸಮಾರಂಭವೊಂದರಲ್ಲಿ ಮಹಿಳೆಯ ಸೀರೆ ಎಳೆದು ಗದರಿಸಿದ ವೀಡಿಯೊ ಕೂಡ ಈಗ ಮುನ್ನೆಲೆಗೆ ಬಂದಿದೆ. ಇದು ಕೂಡ ಕೆಲವು ವರ್ಷ ಹಿಂದಿನ ವೀಡಿಯೊ ಆಗಿದ್ದು, ಈಗ ಯಾರೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಕಾಲೆಳೆಯುತ್ತಿದ್ದಾರೆ.
ಅದೇ ರೀತಿ ಬಿಜೆಪಿಯ ನಾಯಕರ ಕೆಲವು ವೀಡಿಯೊಗಳನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಳೆ ನೆನಪುಗಳನ್ನು ಕೆದಕುತ್ತಿದ್ದಾರೆ.