ಮಂಡ್ಯದ ಸಮ್ಮೇಳನಕ್ಕೆ ಇಂದು ತೆರೆ ; ದಾಖಲೆ ಸಂಖ್ಯೆಯಲ್ಲಿ ಆಗಮಿಸಿದ ಕನ್ನಡಾಭಿಮಾನಿಗಳು
ಮಂಡ್ಯ : 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮಂಡ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ವರ್ಷದ ಸಮ್ಮೇಳನದ ಸ್ಥಳ ಘೋಷಿಸಲಾಗಿದೆ. ಮೂರನೇ ದಿನವಾದ ಇಂದು ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದೆ. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.
ಬಳ್ಳಾರಿ, ಕೋಲಾರ, ಯಾದಗಿರಿ ಸೇರಿದಂತೆ ಹೊಸ ಜಿಲ್ಲೆಗಳು ಸಾಹಿತ್ಯ ಸಮ್ಮೇಳನಕ್ಕೆ ಅತಿಥ್ಯಕ್ಕೆ ಕೋರಿಕೆ ಸಲ್ಲಿಸಿದ್ದವು. ಆದರೆ ಅಂತಿಮವಾಗಿ ಬಳ್ಳಾರಿ ಜಿಲ್ಲೆಗೆ ಸಮ್ಮೇಳನದ ಅತಿಥ್ಯ ನೀಡಲು ಎಲ್ಲ ಜಿಲ್ಲಾ ಸಮಿತಿಗಳು ನಿರ್ಧರಿಸಿವೆ. ಈ ಮೂಲಕ ಬಳ್ಳಾರಿಗೆ 66 ವರ್ಷದ ಬಳಿಕ ಸಾಹಿತ್ಯ ಸಮ್ಮೇಳನದ ಅತಿಥ್ಯ ವಹಿಸುವ ಅವಕಾಶ ದೊರೆತಿದೆ. ಈ ಹಿಂದೆ 1926, 1938 ಮತ್ತು 1958ರಲ್ಲಿ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆದಿತ್ತು.
ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ದಾಖಲೆ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಒಂದೆಡೆ ವಿಚಾರಗೋಷ್ಠಿ, ಮತ್ತೊಂದೆಡೆ ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳು ಜನರನ್ನ ಆಕರ್ಷಿಸುತ್ತಿವೆ. ವಿವಿಧ ಬಗೆಯ ಖಾದ್ಯ ಹೊಟ್ಟೆ ತಣಿಸುತ್ತಿವೆ.
ಕಳೆದ ಎರಡು ದಿನಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ 3 ಲಕ್ಷ ಜನರು ಆಗಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಸಮ್ಮೇಳನದ ಅಂಗವಾಗಿ 450 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಸಾಹಿತಿಗಳು, ಸಾಹಿತ್ಯಾಸಕ್ತರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ತಮಗಿಷ್ಟವಾದ ಪುಸ್ತಕಗಳ ಖರೀದಿಯಲ್ಲಿ ಬಿಸಿಯಾಗಿದ್ದಾರೆ. ಪುಸ್ತಕ ಮಳಿಗೆಗಳ ಮಾಲೀಕರು ಕೂಡ ಉತ್ತಮ ವ್ಯಾಪಾರದಿಂದಾಗಿ ಖುಷಿಯಾಗಿದ್ದಾರೆ.
ಇಂದು ತೆರೆ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ. ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಉಪಸ್ಥಿತರಿರುತ್ತಾರೆ.