ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿತ್ತು ನಾಯಿಗಳ ಕಾದಾಟದ ವಿಲಕ್ಷಣ ಪಂದ್ಯ
ಜೈಪುರ: ಕೋಳಿಅಂಕ, ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್ ನಡೆಯುವುದು ಗೊತ್ತು, ಆದರೆ ಇಲ್ಲಿ ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್ ಕಟ್ಟುವ ವಿಚಿತ್ರ ಪಂದ್ಯವೊಂದು ನಡೆಯುತ್ತಿದೆ. ರಾಜಸ್ಥಾನದ ಜೈಪುರ ಸಮೀಪ ಇಂಥದ್ದೊಂದು ವಿಲಕ್ಷಣ ಮತ್ತು ಕ್ರೂರ ಪಂಂದ್ಯ ನಡೆದು ಅದರ ಮೇಲೆ ಲಕ್ಷಗಟ್ಟಲೆ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಈ ಸಂಬಂಧ 80ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೈಪುರ ಹನುಮಾನ್‌ಗಢ ಎಂಬಲ್ಲಿ ಫಾರ್ಮ್ ಹೌಸ್ ಒಂದರಲ್ಲಿ ಡಾಗ್ ಫೈಟ್ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ 81 ಜನರನ್ನು ಬಂಧಿಸಲಾಗಿದೆ. ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದಾಗ 19 ವಿದೇಶಿ ತಳಿಯ ನಾಯಿಗಳು ಹಾಗೂ 15 ವಾಹನಗಳನ್ನು ಜಪ್ತಿ ಮಾಡಿದ್ದು, ಘಟನೆ ವೇಳೆ 81 ಮಂದಿಯನ್ನು ಬಂಧಿಸಿರುವುದಾಗಿ ಹನುಮಾನ್‌ಗಢ ಎಸ್ಪಿ ಅರ್ಷದ್ ಅಲಿ ತಿಳಿಸಿದ್ದಾರೆ.
ಪೊಲೀಸರು ದಾಳಿ ಮಾಡಿದಾಗ ಕೆಲವರು ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ. ಕೆಲವರು ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನ ಬಂಧಿಸಲಾಗಿದೆ. ಬೆಟ್ಟಿಂಗ್ ಆರೋಪದ ಮೇಲೆ ಸಿಕ್ಕಿಬಿದ್ದವರ ಪೈಕಿ ಹೆಚ್ಚಿನವರು ಪಂಜಾಬ್, ಹರಿಯಾಣ ಮೂಲದವರಾಗಿದ್ದಾರೆ. ಅವರೆಲ್ಲರೂ ಖಾಸಗಿ ವಾಹನದಲ್ಲಿ ತಮ್ಮ ನಾಯಿಗಳನ್ನು ಫೈಟಿಂಗ್‌ಗೆ ತಂದಿದ್ದರು. ಕಾದಾಟದ ವೇಳೆ ಕೆಲವು ನಾಯಿಗಳು ಗಾಯಗೊಂಡಿದ್ದು, ಅವುಗಳನ್ನು ಚಿಕಿತ್ಸೆಗಾಗಿ ಶ್ವಾನ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರ್ಷದ್ ಅಲಿ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಜೂಜಾಟ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸುಮಾರು 250 ಸದಸ್ಯರನ್ನು ಹೊಂದಿರುವ ಸೋಷಿಯಲ್ ಮೀಡಿಯಾ ಗ್ರೂಪ್ ಸಹ ಮಾಡಿಕೊಂಡಿದ್ದರು ಎಸ್ಪಿ ಮಾಹಿತಿ ನೀಡಿದ್ದಾರೆ.