ಹೊಸವರ್ಷ, ಕ್ರಿಸ್‌ಮಸ್ ಖರೀದಿಗಾಗಿ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ ಭಯೋತ್ಪದನಾ ಕೃತ್ಯ
ಬರ್ಲಿನ್: ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಶುಕ್ರವಾರ ರಾತ್ರಿ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಗೆ ಕಾರೊಂದು ನುಗ್ಗಿ ಇಬ್ಬರು ಮೃತಪಟ್ಟು ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ಭಯೋತ್ಪಾದಕ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸವರ್ಷ ಮತ್ತು ಕ್ರಿಸ್‌ಮಸ್ ಪ್ರಯುಕ್ತ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ರಾತ್ರಿ 7 ಗಂಟೆ ಸುಮಾರಿಗೆ ಮಾರುಕಟ್ಟೆಯಲ್ಲಿ ಕಾರು ಜನರನ್ನು ಗುದ್ದಿಕೊಂಡು ಹೋಗಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
15 ಜನರು ಗಂಭೀರವಾಗಿ ಗಾಯಗೊಂಡಿರುವ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕ್ರಿಸ್‌ಮಸ್, ಹೊಸವರ್ಷ ಆಚರಣೆಯ ಸಡಗರದಲ್ಲಿರುವ ಜನರನ್ನು ಈ ಹಿಂಸಾಚಾರ ಬೆಚ್ಚಿಬೀಳಿಸಿದೆ. ಶತಮಾನಗಳ ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ನಿನ್ನೆಯ ಘಟನೆ ಕೊಂದು ಹಾಕಿದೆ. ಮುನ್ನೆಚ್ಚರಿಕೆಯಾಗಿ ವಾರಾಂತ್ಯದ ಕ್ರಿಸ್ಮಸ್ ಮಾರುಕಟ್ಟೆಗಳನ್ನು ಜರ್ಮನ್ ಇತರ ಪಟ್ಟಣಗಳಲ್ಲಿ ಬಂದ್ ಮಾಡಲಾಗಿದೆ.
ಶಂಕಿತ ವ್ಯಕ್ತಿ 2006ರಲ್ಲಿ ಜರ್ಮನಿಗೆ ಬಂದಿದ್ದ 50 ವರ್ಷದ ಸೌದಿ ಮುೂಲದ ವೈದ್ಯ ಎಂದು ರಾಜ್ಯದ ಆಂತರಿಕ ಸಚಿವ ತಮಾರಾ ಝಿಸ್ಚಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮ್ಯಾಗ್ಡೆಬರ್ಗ್‌ನ ದಕ್ಷಿಣಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿರುವ ಬರ್ನ್‌ಬರ್ಗ್‌ನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದಿದ್ದಾರೆ.
ಸ್ಯಾಕ್ಸೋನಿ-ಅನ್ಹಾಲ್ಟ್‌ನ ರಾಜಧಾನಿಯಾಗಿ ಕಾರ್ಯನಿರ್ವಹಿಸುವ ಬರ್ಲಿನ್‌ನ ಪಶ್ಚಿಮಕ್ಕೆ ಸುಮಾರು 2,40,000 ಜನರಿರುವ ಮ್ಯಾಗ್ಡೆಬರ್ಗ್‌ನಲ್ಲಿ ಹಿಂಸಾಚಾರ ಸಂಭವಿಸಿದೆ. ಎಂಟು ವರ್ಷಗಳ ಹಿಂದೆ ಇಸ್ಲಾಮಿಕ್ ಉಗ್ರಗಾಮಿಯೊಬ್ಬ ಬರ್ಲಿನ್‌ನಲ್ಲಿ ಜನನಿಬಿಡ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಟ್ರಕ್ ಓಡಿಸಿದಾಗ 13 ಜನರು ಸಾವಿಗೀಡಾಗಿ ಅನೇಕರು ಗಾಯಗೊಂಡಿದ್ದರು. ನಿನ್ನೆ ರಾತ್ರಿ ಸಂಭವಿಸಿದ ಕೃತ್ಯ 13 ವರ್ಷದ ಹಿಂದಿನ ಕರಾಳ ಘಟನೆಯನ್ನು ನೆನಪಿಸಿದೆ.