43 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಐತಿಹಾಸಿಕ ಭೇಟಿ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕುವೈಟ್ ಪ್ರವಾಸ ಕೈಗೊಳ್ಳಲಿದ್ದು, ಭಾರಾತದ ಪ್ರಧಾನಿಯೊಬ್ಬರು 43 ವರ್ಷಗಳ ಕುವೈಟ್‌ಗೆ ಭೇಟಿ ನೀಡುತ್ತಿರುವ ಕಾರಣಕ್ಕೆ ಈ ಪ್ರವಾಸ ವಿಶೇಷ ಎನಿಸಿದೆ. ಮೋದಿ ಡಿಸೆಂಬರ್ 21 ಮತ್ತು 22 ರಂದು ಕುವೈಟ್‌ಗೆ ಭೇಟಿ ನೀಡಲಿದ್ದಾರೆ. ಕುವೈಟ್‌ನಲ್ಲಿ ಭಾರತ ಮೂಲದ ಲಕ್ಷಗಟ್ಟಲೆ ಮಂದಿ ನೌಕರಿ ಮಾಡುತ್ತಿದ್ದು, ಉಭಯ ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಯಿಂದ ಇಲ್ಲಿರುವ ಭಾರತೀಯರಿಗೆ ಒಳಿತಾಗಲಿದೆ. ಕುವೈಟ್‌ನ ಅಮೀರ್ (ರಾಜ) ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಲ್ಲಿಗೆ ಹೋಗುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 43 ವರ್ಷಗಳ ಹಿಂದೆ 1981ರಲ್ಲಿ ಕುವೈಟ್‌ಗೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿಯವರ ವಿಮಾನ ಕುವೈಟ್‌ಗೆ ಬೆಳಗ್ಗೆ ಹೊರಡಲಿದ್ದು, ಬೆಳಗ್ಗೆ 11.35ಕ್ಕೆ ಕುವೈಟ್ ತಲುಪಲಿದ್ದಾರೆ. ಸ್ಥಳೀಯ ಸಮಯದ ಪ್ರಕಾರ, ಪ್ರಧಾನಿ ಮೋದಿ ಮಧ್ಯಾಹ್ನ 2.50ಕ್ಕೆ ಸ್ಥಳೀಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಹೋಗುತ್ತಾರೆ, ಅಲ್ಲಿ ಅವರು 4000-5000 ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಗಾಲ್ಫ್ ಕಪ್ ಫುಟ್ಬಾಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ನಾಳೆ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಕುವೈಟ್ ಅಮಿರ್ ಮತ್ತು ಕ್ರೌನ್ ಪ್ರಿನ್ಸ್ ಅವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದಾರೆ.
ಕುವೈಟ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ಕುವೈಟ್‌ನಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಭಾರತೀಯ ಸಮುದಾಯದ ಜನರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ. ಕುವೈಟ್‌ನಲ್ಲಿ ಸುಮಾರು 10 ಲಕ್ಷ ಭಾರತೀಯರು ಇದ್ದಾರೆ. ಇಂಧನ, ಹೈಡ್ರೋಕಾರ್ಬನ್ ಮತ್ತು ವ್ಯಾಪಾರ ಸಂಬಂಧಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕುವೈಟ್‌ನ ಅಮೀರ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಸ್ಥಳೀಯ ಕರೆನ್ಸಿಯ ವ್ಯಾಪಾರದ ಬಗ್ಗೆಯೂ ಚರ್ಚಿಸಲಾಗುವುದು.