ರಾಹುಲ್‌ ಗಾಂಧಿ ವಿರುದ್ಧ ಕ್ರೈಂ ಬ್ರಾಂಚ್‌ ತನಿಖೆ

ಬಿಜೆಪಿ ಸಂಸದರನ್ನು ತಳ್ಳಿ ಗಾಯಗೊಳಿಸಿದ ಪ್ರಕರಣ

ಹೊಸದಿಲ್ಲಿ: ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಂಸದರ ನಡುವೆ ನಡೆದ ತಳ್ಳಾಟ ಮತ್ತು ರಾಹುಲ್‌ ಗಾಂಧಿ ತಳ್ಳಿದಾಗ ಬಿಜೆಪಿಯ ಇಬ್ಬರು ಸಂಸದರು ಬಿದ್ದು ಗಾಯಗೊಂಡಿರುವ ಪ್ರಕರಣದ ತನಿಖೆಯನ್ನು ದಿಲ್ಲಿಯ ಕ್ರೈಂಬ್ರಾಂಚ್‌ ನಡೆಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ದಾಖಲಿಸಿದ ಪ್ರಕರಣಗಳ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
ಬಿಜೆಪಿ ನೀಡಿದ ದೂರಿನ ಆಧಾರದಲ್ಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗುರುವಾರ ಸಂಸತ್ತಿನ ಆವರಣದಲ್ಲಿ ನಡೆದ ಗದ್ದಲದ ಸಂದರ್ಭದಲ್ಲಿ ದೈಹಿಕ ಹಲ್ಲೆ ಮತ್ತು ಗಲಬೆಗೆ ಪ್ರಚೋದನೆಯ ಆರೋಪದ ಮೇಲೆ ಬಿಜೆಪಿ ದೂರು ನೀಡಿದ ಕೆಲವೇ ಗಂಟೆಗಳ ನಂತರ ದಿಲ್ಲಿ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಭಾರತೀಯರ ಸೆಕ್ಷನ್ 117 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನುಂಟುಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ), 131 (ಅಪರಾಧ ಬಲದ ಬಳಕೆ), 351 (ಅಪರಾಧದ ಬೆದರಿಕೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಹುಲ್ ಗಾಂಧಿಯನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆ ನಡೆದಿದೆ ಎನ್ನಲಾದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಪೊಲೀಸರು ಲೋಕಸಭೆ ಸಚಿವಾಲಯಕ್ಕೆ ಮನವಿ ಮಾಡಲಿದ್ದಾರೆ. ಸೆಕ್ಷನ್ 117 ಹೊರತುಪಡಿಸಿ, ರಾಹುಲ್ ಗಾಂಧಿ ವಿರುದ್ಧ ವಿಧಿಸಲಾದ ಎಲ್ಲ ಸೆಕ್ಷನ್‌ಗಳು ಜಾಮೀನು ನೀಡಬಹುದಾದವುಗಳು ಎನ್ನಲಾಗಿದೆ.































 
 

ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ವಿಚಾರದ ಮೇಲೆ ಸಂಸತ್ ಭವನದೊಳಗೆ ವಿರೋಧ ಪಕ್ಷದ ಸಂಸದರು ಮತ್ತು ಬಿಜೆಪಿ ಸದಸ್ಯರ ನಡುವೆ ಘರ್ಷಣೆ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿರಿಯ ಸಂಸದರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ರಾಹುಲ್ ಗಾಂಧಿ ಆ ಆರೋಪವನ್ನು ನಿರಾಕರಿಸಿದ್ದಾರೆ.
ಇಂಡಿಯಾ ಒಕ್ಕೂಟದ ಸಂಸದರು ಸಂಸತ್​ನ ಮುಖ್ಯ ಪ್ರವೇಶದ್ವಾರದ ಬಳಿ ಘರ್ಷಣೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸಂಸದರು ಆಕ್ರಮಿಸಿಕೊಂಡಿರುವ ಪ್ರದೇಶದ ಮೂಲಕ ಸಂಸತ್ತಿಗೆ ಪ್ರವೇಶಿಸಲು ಇಂಡಿಯಾ ಬ್ಲಾಕ್ ಸದಸ್ಯರು ಪ್ರಯತ್ನಿಸಿದರು. ಮೆಟ್ಟಿಲುಗಳ ಖಾಲಿ ಭಾಗವನ್ನು ಬಳಸುವ ಬದಲು, ಪ್ರತಿಪಕ್ಷ ನಾಯಕರು ಬಿಜೆಪಿ ಸಂಸದರ ನಡುವಲ್ಲೇ ನುಗ್ಗಿದರು. ಇದರಿಂದ ತಳ್ಳಾಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು.

ರಾಹುಲ್‌ ಗಾಂಧಿ ತಳ್ಳಿದಾಗ ಒಡಿಶಾದ ಬಿಜೆಪಿ ಸಂಸದರಾದ 69 ವರ್ಷದ ಸಾರಂಗಿ ಅವರಿಗೆ ಬಿದ್ದು ಗಾಯಗಳಾಗಿವೆ. ಸಂಸತ್ ಆವರಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಬಿಜೆಪಿ ಸಂಸದ ಮುಖೇಶ್ ರಜಪೂತ್ ಕೂಡ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಗಾಲ್ಯಾಂಡ್ ಬಿಜೆಪಿ ಸಂಸದೆ ಕೂಡ ರಾಹುಲ್ ಗಾಂಧಿ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top