ಲಕ್ಷ್ಮೀ ಹೆಬ್ಬಾಳ್ಕರ್‌, ಡಿಕೆಶಿ ಸುವರ್ಣ ಸೌಧದಲ್ಲೇ ಹೆಣ ಕೆಡಹುವ ಧಮಕಿ ಹಾಕಿದ್ದಾರೆ : ನ್ಯಾಯಾಲಯಕ್ಕೆ ತಿಳಿಸಿದ ಸಿ.ಟಿ.ರವಿ

ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಬೆದರಿಕೆ ಹಾಕಿರುವ ಕುರಿತು ದೂರು

ಬೆಳಗಾವಿ: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಗುರುವಾರ ಮಧ್ಯಾಹ್ನ ವಿಧಾನಸಭಾ ಕಾರಿಡಾರ್​ನಲ್ಲಿ ಮಂತ್ರಿ ಧಮಕಿ ಹಾಕಿದ್ದರು. ರಾತ್ರಿ ನನ್ನನ್ನು ಪೊಲಿಸರು ಎಲ್ಲೆಲ್ಲೋ ಕರೆದೊಯ್ಯತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ. ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿ.ಕೆ ಶಿವಕುಮಾರ್ ಕೌನ್ಸಿಲ್ ಹಾಲ್ ಒಳಗೆ ಹೇಳಿದ್ದರು ಎಂದು ಸಿ.ಟಿ ರವಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್​ಸಿ ಸಿ.ಟಿ ರವಿ ಅವರನ್ನು ಪೊಲೀಸರು ಶುಕ್ರವಾರ ಬೆಳಗಾವಿ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದರು. ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ, ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಕೋರ್ಟ್​ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ, ನನ್ನನ್ನು ಪೊಲಿಸರು ನಿಗೂಢ ಜಾಗಕ್ಕೆ ಕರೆತಂದು ನಿಲ್ಲಿಸಿದ್ದಲ್ಲದೆ ದೂರ ಹೋಗಿ ಮಾತನಾಡುತ್ತಾ ಇದ್ದರು. ಖಾನಾಪುರದಲ್ಲಿ ನನಗೆ ಹೊಡೆದರು, ತಲೆಯಲ್ಲಿ ರಕ್ತ ಬರುತ್ತಿತ್ತು ಎಂದು ಹೇಳಿದರು. ‘ಯಾರು ಹೊಡೆದಿದ್ದಾರೆ’ ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ರವಿ, ಯಾರು ಹೊಡೆದರು ಎಂದು ಗೊತ್ತಾಗಲಿಲ್ಲ. ಪೊಲಿಸರೇ ಹೊಡೆದಿರಬಹುದು, ಅವರೇ ಎತ್ತಿಕೊಂಡು ಹೋದರು ಎಂದರು.

ಸಿಟಿ ರವಿ ಪರ ಜಾಮೀನು ಅರ್ಜಿ ಸಲ್ಲಿಸಿ ವಕೀಲ ಜಿರಲಿ ವಾದ ಮಂಡನೆ ಮಾಡಿದರು. ನಿನ್ನೆ ಸಂಜೆ 6.30ರ ಸುಮಾರಿಗೆ ಪೊಲೀಸರು ಸುವರ್ಣಸೌಧದಲ್ಲಿ ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ 10 ಗಂಟೆಗಳ ಕಾಲ 3 ಜಿಲ್ಲೆಗಳಲ್ಲಿ ಸಿ.ಟಿ ರವಿಯನ್ನು ಸುತ್ತಿಸಿದ್ದಾರೆ. ನಂದಗಡ, ಖಾನಾಪುರ, ಧಾರವಾಡ, ಗದಗ, ರಾಮದುರ್ಗ, ಸವದತ್ತಿ ಹೀಗೆ ಎಲ್ಲಾ ಕಡೆಯೂ ಪೊಲೀಸರು ಸುತ್ತಿಸಿದ್ದಾರೆ. ಕೋರ್ಟ್​ಗೆ ಬರುವವರೆಗೂ ನಿಗೂಢ ಜಾಗಕ್ಕೆ ಕರೆದೊಯ್ದಿದ್ದರು ಎಂದು ವಕೀಲರು ತಿಳಿಸಿದರು.































 
 

ಪ್ರತಿ 10 ನಿಮಿಷಕ್ಕೆ ಒಮ್ಮೆ ಪೊಲೀಸರಿಗೆ ಯಾರದ್ದೋ ಕರೆ ಬರುತ್ತಾ ಇತ್ತು. ಅವರ ಸೂಚನೆಯಂತೆ ಪೊಲಿಸರು ವರ್ತಿಸುತ್ತಾ ಇದ್ದರು ಎಂದು ರವಿ ನೀಡಿದ ಮಾಹಿತಿಯನ್ನು ವಕೀಲರು ನ್ಯಾಯಾಧೀಶೆ ಮುಂದೆ ತಿಳಿಸಿದರು. ರವಿ ನನಗೂ ಕೂಡ ಯಾವ ಕಾರಣಕ್ಕೆ ಅರೆಸ್ಟ್ ಎಂದು ತಿಳಿಸಿಲ್ಲ. ನಾನು ಕೇಳಿದರೂ ಹೇಳಿಲ್ಲ. ರವಿ ಅವರು ನಿನ್ನೆ ನಡೆದ ಘಟನೆಯಿಂದ ಭಾವನಾತ್ಮಕವಾಗಿ ನೊಂದಿದ್ದಾರೆ. ಪೊಲೀಸರು ಅವರ ವಾಚ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ರವಿ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ.

ಸಿ.ಟಿ ರವಿ ದೂರು ನೀಡಿದರೂ ಪೊಲೀಸರು ಸ್ವೀಕರಿಸಿಲ್ಲ. ಎಫ್‌ಐಆರ್ ದಾಖಲಿಸಲು ಹೇಳಿದರೂ ಪೊಲೀಸರು ದಾಖಲಿಸಿಲ್ಲ. ಈ ವೇಳೆ ಎಫ್‌ಐಆರ್ ದಾಖಲಿಸಿಕೊಳ್ಳದಿರುವುದು ಕೂಡ ಅಪರಾಧ ಎಂದು ರವಿ ಪರ ವಕೀಲ ಜಿರಲಿ ವಾದ ಮಂಡನೆ ಮಾಡಿದರು.

ಆರೋಪಿ ಜಾಮೀನುರಹಿತ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಸೆಕ್ಷನ್​ 480ರ ಅಡಿ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ರವಿ ಸಾಮಾನ್ಯ ವ್ಯಕ್ತಿಯಲ್ಲ. ಅವರು ರೌಡಿಯೂ ಅಲ್ಲ. ಘಟನೆ ನಡೆದಿದ್ದು ಸುವರ್ಣ ವಿಧಾನಸೌಧದಲ್ಲಿ. ಅವರ ಬಂಧನಕ್ಕೆ ಸಭಾಪತಿ ಅನುಮತಿ ಅಗತ್ಯ ಇದೆ. ಪೊಲೀಸರು ಯಾವುದೇ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂದು ವಕೀಲ ಜಿರಲಿ ವಾದ ಮಂಡಿಸಿದರು.
ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅರವಿಂದ್ ಬೆಲ್ಲದ್ ಸೇರ ಇತರ ನಾಯಕರು ಕೋರ್ಟ್ ಹಾಲ್​​ನಲ್ಲಿ ನಿಂತುಕೊಂಡು ವಾದ ಆಲಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top