ಮುಡಾ ಹಗರಣ ತನಿಖಾಧಿಕಾರಿಗೆ ಆಯೋಗದ ಅಧ್ಯಕ್ಷರಾಗಲು ಅರ್ಹತೆಯಿಲ್ಲ : ಸ್ನೇಹಮಯಿ ಕೃಷ್ಣ ಹೊಸ ಆರೋಪ

ಏಕಸದಸ್ಯ ಆಯೋಗದ ಮುಖ್ಯಸ್ಥರಾಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದೂ ನೇಮಕ

ಮೈಸೂರು : ಮುಡಾ ಹಗರಣದ ತನಿಖೆ ನಡೆಸಲು ಸರಕಾರ ರಚಿಸಿರುವ ಏಕಸದಸ್ಯ ಆಯೋಗದ ಮುಖ್ಯಸ್ಥರಾಗಿರುವ ನಿವೃತ್ತ ನ್ಯಾಯಾಧೀಶ ಪಿ.ಎನ್‌.ದೇಸಾಯಿ ಈ ಹುದ್ದೆಗೆ ಅರ್ಹರಲ್ಲ ಎಂದು ಹಗರಣದ ಮುಖ್ಯ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಬಿಡುಗಡೆಗೊಳಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರನ್ನು ಸಿಎಟಿ ಸದಸ್ಯರನ್ನಾಗಿ‌ ನೇಮಕ ಮಾಡಿ ಈ ಹಿಂದೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವೈಯಕ್ತಿಕ ಕಾರಣದಿಂದ‌ ಪಿ.ಎನ್ ದೇಸಾಯಿ ಸದಸ್ಯತ್ವ ಒಪ್ಪಿರಲಿಲ್ಲ. ಆ ಸಂದರ್ಭದಲ್ಲಿ ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಪಿ.ಎನ್ ದೇಸಾಯಿ ಒಪ್ಪಿದ್ದರು. ನೇಮಕಾತಿ ಆದೇಶವನ್ನು ನಿರಾಕರಿಸದೆ ಇರುವುದು, ಆದೇಶ ಆದ 30 ದಿನಗಳ ಒಳಗಾಗಿ ಜವಾಬ್ದಾರಿ ಸ್ವೀಕರಿಸುವ ನಿಬಂಧನೆಗಳನ್ನು ಪಿ.ಎನ್ ದೇಸಾಯಿ ಒಪ್ಪಿದ್ದರು.































 
 

ಒಂದ ವೇಳೆ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೂರು ವರ್ಷಗಳ ಕಾಲ ಯಾವುದೇ ಆಯೋಗಕ್ಕೆ ನೇಮಕ ಮಾಡದಂತೆ ಡಿಬಾರ್ ಆಗಬಹುದು ಎಂಬ ನಿಬಂಧನೆಗೂ ಒಪ್ಪಿದ್ದರು. ನಂತರ ಸಿಎಟಿ ಸದಸ್ಯತ್ವ ಒಪ್ಪದ ಕಾರಣ ಅವರನ್ನು ಮೂರು ವರ್ಷ ಶಾಸನಬದ್ಧ ಸಮಿತಿ, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗಳಿಗೆ ನೇಮಕ ಮಾಡದಂತೆ ಆದೇಶ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು ಎಂಬ ಮಾಹಿತಿ ನೀಡಿ ಈ ಸಂಬಂಧ ಇರುವ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸ್ನೇಹಮಯಿ ಕೃಷ್ಣ ಪತ್ರ ಬರೆದು ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಪಿ.ಎನ್ ದೇಸಾಯಿ ಅವರಿಗೆ ನೀಡಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕು. ಅವರು ಆಯೋಗದ ಅಧ್ಯಕ್ಷರಾಗಲು ಅರ್ಹರಲ್ಲ ಎಂಬ ವಿಚಾರ ಗೊತ್ತಿದ್ದರೂ ಅಧ್ಯಕ್ಷರಾಗಿ ಮುಂದುವರಿದಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸ್ನೇಹಮಯಿ ‌ಕೃಷ್ಣ ಮನವಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top