ಪುಣ್ಯಕ್ಷೇತ್ರಗಳ ದರ್ಶನಕ್ಕೆ ಸರಕಾರದಿಂದ ಸಬ್ಸಿಡಿ ಘೋಷಣೆ
ಬೆಂಗಳೂರು : ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಮಾಡಲು ಇಚ್ಚೆಯುಳ್ಳವರಿಗೆ ಸರಕಾರ ಸಬ್ಸಿಡಿ ರೂಪದಲ್ಲಿ ನೆರವು ನೀಡಲಿದೆ. ಹೊಸ ವರ್ಷದ ಉಡುಗೊರೆಯಾಗಿ ತೀರ್ಥಯಾತ್ರಿಕರಿಗೆ ಸರ್ಕಾರ ಇದೇ ಮೊದಲ ಬಾರಿಗೆ ಮೂರು ಟೂರ್ ಪ್ಯಾಕೇಜ್ಗಳಿಗೆ ಸಬ್ಸಿಡಿ ಘೋಷಣೆ ಮಾಡಿದೆ. ಪುರಿ ಜಗನ್ನಾಥ, ದ್ವಾರಕಾ ಹಾಗೂ ದಕ್ಷಿಣದ ಕ್ಷೇತ್ರಗಳಿಗೆ ತೆರಳುವವರಿಗೆ ಸಹಾಯಧನ ಘೋಷಣೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ರಾಮೇಶ್ವರ-ತಿರುವನಂತಪುರ
ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂಗೆ ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್‌ಗೆ 25,000 ರೂ. ವೆಚ್ಚವಾಗುತ್ತದೆ. ಈ ಪೈಕಿ ಸರ್ಕಾರದಿಂದ 10,000 ರೂ. ಸಬ್ಸಿಡಿ ದೊರೆಯಲಿದೆ. 5,000 ರೂ. ಸಹಾಯಧನ ಸೇರಿ 15,000 ರೂ. ಸರಕಾರವೇ ಭರಿಸುದೆ. ಯಾತ್ರಾರ್ಥಿಗಳು 10,000 ರೂ. ಮಾತ್ರ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದ್ವಾರಕಾ-ತ್ರಯಂಬಕೇಶ್ವರ
ದ್ವಾರಕಾ ನಾಗೇಶ್ವರ-ಸೋಮನಾಥ್-ತ್ರಯಂಬಕೇಶ್ವರ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದೆ. ಅದೇ ರೀತಿ ಪುರಿ- ಕೊನಾರ್ಕ್, ಗಂಗಾಸಾಗರ್, ಕೊಲ್ಕತ್ತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ತಲಾ ಮೊತ್ತ 32,500 ರೂ. ಆಗಿದೆ. ಈ ಪೈಕಿ 17,500 ರೂ. ಸರ್ಕಾರದಿಂದ ಭರಿಸಲಾಗುತ್ತದೆ. ಉಳಿದ 15,000 ರೂ. ಯಾತ್ರಿಕರು ಪಾವತಿಸಬೇಕು.
ರೈಲಿನ ಪ್ರಯಾಣವಾಗಿದ್ದು, ಟ್ರೈನ್ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಆಹಾರ ನೀಡಲಾಗುತ್ತದೆ. 3 ಟೈರ್ ಎಸಿ ರೈಲಿನಲ್ಲಿ ಪ್ರಯಾಣಿಸಬಹುದು. ಊಟ, ವಸತಿ, ಸ್ಥಳೀಯ ಸಾರಿಗೆ ಹಾಗೂ ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯ ಏರುಪೇರಾದರೆ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ. ರೈಲಿನಲ್ಲಿ ವೈದ್ಯರು, ನರ್ಸ್ಗಳ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಯಾತ್ರಿಗಳು ಹತ್ತುವ ಹಾಗೂ ಇಳಿಯುವ ಸ್ಥಳಗಳು: ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ಣಾಣ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಆಗಿವೆ. ಯಾತ್ರೆ ಹೊರಡುವ ದಿನಾಂಕ: 25-1-2025 ಆಗಿದ್ದು ವಾಪಸ್ ಬರುವ ದಿನಾಂಕ 30-1-2025 ಆಗಿದೆ.
ಪುರಿ ಜಗನ್ನಾಥ ದರ್ಶನ ಹಾಗೂ ದ್ವಾರಕಾ ಯಾತ್ರಿಗಳು ಹತ್ತುವ ಮತ್ತು ಇಳಿಯುವ ಸ್ಥಳಗಳು; ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ.
ದ್ವಾರಕಾ ಯಾತ್ರೆ ಹೊರಡುವ ದಿನಾಂಕ 06-1-2025 ಆಗಿದ್ದು, ಹಿಂತಿರುಗುವ ದಿನಾಂಕ 13-1-2025 ಆಗಿದೆ. ಪುರಿಜಗನ್ನಾಥ ದರ್ಶನಕ್ಕೆ ಹೊರಡುವ ದಿನಾಂಕ ದಿನಾಂಕ: 3-2-2025 ಆಗಿದ್ದು, ವಾಪಸಾಗುವ ದಿನಾಂಕ 10-02-2025 ಆಗಿದೆ.