ಎಲಿಫೆಂಟಾ ಕೇವ್ಸ್‌ಗೆ ಪ್ರಯಾಣಿಕರನ್ನು ಒಯ್ಯುತ್ತಿದ್ದ ದೋಣಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿ ಅವಘಡ
ಮುಂಬಯಿ: ಮುಂಬಯಿಯ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಒಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ರಕ್ಷಿಸಲ್ಪಟ್ಟ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರಲ್ಲಿ 10 ಪ್ರಯಾಣಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಕೇವ್ಸ್‌ಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
4 ಸೇನಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು ಹಾಗೂ 1 ಕೋಸ್ಟ್ಗಾರ್ಡ್ ಬೋಟ್ಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ. 3 ಮೆರೈನ್ ಪೊಲೀಸ್ ಕ್ರಾಫ್ಟ್‌ಗಳನ್ನೂ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ. 10 ಪ್ರವಾಸಿಗರು, ಮೂವರು ನೌಕಾಪಡೆ ಸಿಬ್ಬಂದಿ ದುರ್ಮರಣವನ್ನಪ್ಪಿದ್ದಾರೆ. ಪ್ರವಾಸಿಗರು ಎಲಿಫೆಂಟಾ ದ್ವೀಪಗಳಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪ್ರವಾಸಿ ತಾಣವಾಗಿರುವ ಎಲಿಫೆಂಟಾ ಕೇವ್ಸ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೊಡ್ಡ ದೋಣಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾದ ಪರಿಣಾಮ ದೋಣಿ ಮುಳುಗಿದೆ. 80 ಪ್ರಯಾಣಿಕರು ಮತ್ತು 5 ಸಿಬ್ಬಂದಿ ಸೇರಿದಂತೆ 101 ಜನರು ದೋಣಿಯಲ್ಲಿದ್ದರು.
ಈ ಸಂದರ್ಭದಲ್ಲಿ ಈ ಪರಿಸರದಲ್ಲಿಯೇ ಇದ್ದ ಸಿಐಎಸ್‌ಎಫ್‌ನ ಸಮುದ್ರ ಗಸ್ತು ದೋಣಿಯೊಂದರಲ್ಲಿದ್ದ ಮೂವರು ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿದ ಪರಿಣಾಮವಾಗಿ ಆರಂಭದಲ್ಲೇ 35 ಪ್ರಯಾಣಕರ ಜೀವ ಉಳಿಸಲು ಸಾಧ್ಯವಾಗಿದೆ. ಅನಂತರ ಉಳಿದವರು ಬಂದು 72 ಮಂದಿಯನ್ನು ರಕ್ಷಿಸಿದ್ದಾರೆ.
ಇಂಜಿನ್ ಪರೀಕ್ಷೆ ನಡೆಸುತ್ತಿದ್ದ ನೌಕಾಪಡೆಯ ಸ್ಪೀಡ್ ಬೀಟ್ ಚಾಲಕನ ನಿಯಂತ್ರಣ ತಪ್ಪಿ ಭಾರಿ ವೇಗದಿಂದ ಬಂದು ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಘಟನೆಗೆ ಸಂತಾಪ ಸೂಚಿಸಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಘಟನೆಗೆ ಶೋಕ ವ್ಯಕ್ತಪಡಿಸಿದ್ದು, ಕೇಂದ್ರದಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.